

ಮೈಸೂರು: ಅದಮ್ಯ ರಂಗಶಾಲೆ ವತಿಯಿಂದ ಜೂ.14ರಿಂದ ಒಂದು ವರ್ಷ ಅವಧಿಯ ವಾರಾಂತ್ಯ ಅಭಿನಯ ಕಾರ್ಯಾಗಾರ ಹಾಗೂ ರಂಗ ತರಬೇತಿ ಕೋರ್ಸ್ ಆರಂಭವಾಗಲಿದ್ದು, ರಂಗಾಸಕ್ತ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಾರ್ಯದರ್ಶಿ ಚಂದ್ರು ಮಂಡ್ಯ ತಿಳಿಸಿದರು.
ವಿ.ಕೆ.ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ಕಾರ್ಯಾಗಾರ ನಡೆಯಲಿದೆ. ಅದಮ್ಯದ ಮುಂದಿನ ಭಾಗವಾಗಿ ಒಂದು ವರ್ಷ ಅವಧಿಗೆ ವಾರಾಂತ್ಯ ಮಕ್ಕಳ ಅಭಿನಯ ಮತ್ತು ರಂಗ ತರಬೇತಿ ಕಾರ್ಯಾಗಾರ ನಗರದ ವಿಜಯನಗರ 3ನೇ ಹಂತದಲ್ಲಿರುವ ವಿ.ಕೆ.ಪಬ್ಲಿಕ್ ಸ್ಕೂಲ್ನಲ್ಲಿ ನಡೆಯಲಿದೆ. ಆಸಕ್ತ ಪಾಲಕರು ತಮ್ಮ ಮಕ್ಕಳನ್ನು ಜೂನ್13 ರೊಳಗೆ ದಾಖಲಿಸಿ ಪ್ರವೇಶಾತಿ ಪಡೆದಿರಬೇಕು. ಜೂ.14ರಿಂದಲೇ ತರಗತಿಗಳು ಪ್ರಾರಂಭವಾಗಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಭಿನಯ, ರಂಗ ಸಂಗೀತ, ಆಂಗಿಕ ಚಲನೆ, ಧ್ವನಿ ಬಳಕೆ ಮತ್ತು ಪರಿಷ್ಕರಣೆ, ಪ್ರಸಾಧನ, ಬೆಳಕು, ರಂಗವಿನ್ಯಾಸ, ಪರಿಕರ ನಿರ್ಮಾಣ, ರಂಗ ಇತಿಹಾಸ, ನಾಟಕ ತಯಾರಿ, ನಾಟಕ ಪ್ರದರ್ಶನ ಸೇರಿದಂತೆ ರಂಗಭೂಮಿ ಮತ್ತು ಸಿನಿಮಾ ಮಾಧ್ಯಮದ ಬೇರೆ ಬೇರೆ ಆಯಾಮಗಳ ಕುರಿತು ಪರಿಚಯಾತ್ಮಕ ಪ್ರಾಯೋಗಿಕ ತರಗತಿಗಳು ನಡೆಯಲಿದ್ದು, ನುರಿತ ರಂಗಭೂಮಿಯ ಸಂಪನ್ಮೂಲ ಶಿಕ್ಷಕರು ತರಬೇತಿ ನೀಡಲಿದ್ದಾರೆ ಎಂದರು.
ಪ್ರತಿ ಶನಿವಾರ ಮತ್ತು ಭಾನುವಾರ ತರಗತಿ ನಡೆಯಲಿದ್ದು, ಶನಿವಾರ ಸಂಜೆ 5.30 ರಿಂದ 8.30 ರವರೆಗೆ, ಭಾನುವಾರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆವರೆಗೆ ತರಗತಿಗಳು ನಡೆಯಲಿವೆ. ಕಾರ್ಯಾಗಾರಕ್ಕೆ ಗರಿಷ್ಠ 25 ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ವಯೋಮಿತಿ 5 ವರ್ಷದಿಂದ 13 ವರ್ಷವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಮೊ.8660103141 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.