ಅದಮ್ಯ ರಂಗ ಶಾಲೆಯಿಂದ ‘ಅದಮ್ಯ ಚೇತನ ಪ್ರಶಸ್ತಿ’ ಪ್ರದಾನ

Adhamya chethana
Published on

ಮೈಸೂರು: ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ಹೇರದೆ ಅವರ ಸಹಜವಾದ ಪ್ರತಿಭೆ ಅರಳಿ ಸಮಾಜಕ್ಕೆ ಸುಗಂಧ ಸೂಸು ವಂತೆ ಮಾರ್ಗದರ್ಶನ ಮಾಡಬೇಕು ಎಂದು ಹೆಚ್ಚುವರಿ ಪ್ರಾದೇಶಿಕ ಆಯುಕ್ತರ ಪಿ. ಶಿವರಾಜ್ ಕರೆ ನೀಡಿದರು.

ಅದಮ್ಯ ರಂಗ ಶಾಲೆ ವತಿಯಿಂದ ಜಯಲಕ್ಷ್ಮೀಪುರಂನ ಶ್ರೀ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡ ‘ಅದಮ್ಯ ಚೇತನ ಪ್ರಶಸ್ತಿ’ ಪ್ರದಾನ ಹಾಗೂ ‘ಹಲೋ ಯಮ’ಮಕ್ಕಳ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಮಕ್ಕಳು ಅರಳುತ್ತಿರುವ ಮೊಗ್ಗುಗಳ ಹಾಗೆ. ಅವರಲ್ಲಿ ಸುಪ್ತ ಪ್ರತಿಭೆ ಹುದುಗಿರುತ್ತದೆ. ಆ ಪ್ರತಿಭೆಯನ್ನು ಹೊರತೆಗೆಯುವುದು ಎಲ್ಲರ ಆದ್ಯ ಜವಾಬ್ದಾರಿ ಎಂದರು.

ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡುತ್ತಿರುವುದು ನಿಜವಾಗಿಯೂ ಅಭಿನಂದನಾರ್ಹ. ಈ ದಿಕ್ಕಿನಲ್ಲಿ ಅದಮ್ಯ ರಂಗಶಾಲೆಯ ಉತ್ಕಟ ಸಮಾಜಸೇವಾ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಯುವ ಬರಹಗಾರರ ಬಳಗ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಮಾತನಾಡಿ, ಸಾಹಿತ್ಯ, ಸಂಸ್ಕೃತಿ, ಸಂಗೀತ, ರಂಗಭೂಮಿ ಕ್ಷೇತ್ರದ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದರಿಂದ ಸದಭಿರುಚಿ ಬೆಳೆದು ಉತ್ತಮ ಸಂಸ್ಕಾರ ಬೆಳೆಯುತ್ತದೆ. ಅವರ ವ್ಯಕ್ತಿತ್ವ ವಿಕಾಸವಾಗುತ್ತದೆ. ಶ್ರೇಷ್ಠ ನಾಗರಿಕರಾಗಿ ಹೊರಹೊಮ್ಮುತ್ತಾರೆ ಎಂದರು.

ಈ ಸಂದರ್ಭ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯದರ್ಶಿಗಳಾದ ಎನ್. ಕಾವ್ಯ, ಎನ್.ಎ. ಜೀವನ್, ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಕೆ.ಟಿ. ಯಮುನಾ ಅವರಿಗೆ ‘ಅದಮ್ಯ ಚೇತನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ, ಅದಮ್ಯ ರಂಗಶಾಲೆಯ ಸ್ಥಾಪಕ ಅದಮ್ಯ ಚಂದ್ರು ಮಂಡ್ಯ, ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಎನ್‌ಎಸ್‌ಎಸ್ ಕ್ರಾರ್ಯಕ್ರಮಾಧಿಕಾರಿ ಎನ್. ಸಂತೋಷ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net