

ವಿಜಯವಾಣಿ ಸುದ್ದಿಜಾಲ ಉಡುಪಿ
ಯಕ್ಷಗಾನವು ಕರ್ನಾಟಕದ ಕರಾವಳಿಯ ಸಾಂಪ್ರದಾಯಿಕ ಕಲೆಯಾಗಿದ್ದು, ಇದು ಭಾವನೆಗಳನ್ನು ಬೆಸೆಯುವ ಕಲೆಯಾಗಿದೆ. ಹಳೆಯ ಕಲೆಯಾಗಿದ್ದರೂ ಸಹ ನಿತ್ಯ ನೂತನವಾಗಿರುವ ಈ ಕಲೆಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಉಡುಪಿ ಅದಮಾರು ಮಠದ ಕಿರಿಯ ಸ್ವಾಮೀಜಿ ಈಶಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಉಡುಪಿಯ ಅದಮಾರು ಮಠದ ಅತಿಥಿ ಗೃಹದಲ್ಲಿ ವಾರಾಣಸಿಯ ರಾಷ್ಟ್ರೀಯ ನಾಟ್ಯ ವಿದ್ಯಾಲಯ (ಎನ್ಎಸ್ಡಿ)ದ ವಿದ್ಯಾರ್ಥಿಗಳಿಗೆ ಪೂರ್ಣಪ್ರಜ್ಞ ಯಕ್ಷಗಾನ ಕೇಂದ್ರ ಹಾಗೂ ಯಕ್ಷಸಂಜೀವ ಯಕ್ಷಗಾನ ಕೇಂದ್ರದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ 25 ದಿನಗಳ ಯಕ್ಷಗಾನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಭಾರತದ ಪುರಾಣ ಕಥೆಗಳೇ ಯಕ್ಷಗಾನಕ್ಕೆ ಆಧಾರವಾಗಿದೆ. ರಾಮಾಯಣ, ಮಹಾಭಾರತದಂತಹ ಕಥೆಗಳನ್ನು ಸುಲಭವಾಗಿ ಜನಮಾನಸಕ್ಕೆ ತಲುಪಿಸುವ ಕಲೆ ಇದಾಗಿದೆ. ಕನ್ನಡ ನಾಡಿನ ಈ ಅಪರೂಪದ ಕಲೆಯನ್ನು ಅನ್ಯರಾಜ್ಯದ ವಿದ್ಯಾರ್ಥಿಗಳು ಕಲಿಯಲು ಬಂದಿರುವುದು ನಿಜಕ್ಕೂ ಸಂತಸದ ವಿಚಾರ. ಇಲ್ಲಿಯ ಹೊಸತನ ನಿಮ್ಮೊಂದಿಗೆ ಕೊಂಡೊಯ್ಯಿರಿ. ಕಲೆಯೊಂದು ತನ್ನ ಸೀಮೆ ದಾಟಿದಾಗಲೂ ಸಹ ಇನ್ನಷ್ಟು ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಯಕ್ಷಗಾನ ಅಕಾಡೆಮಿಯ ನಿಯೋಜಿತ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಉದ್ಯಮಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಎನ್ಎಸ್ಡಿ ನಿರ್ದೇಶಕ ಪ್ರವೀಣಕುಮಾರ್ ಗುಂಜನ್ ಉಪಸ್ಥಿತರಿದ್ದರು. ಯಕ್ಷಗಾನ ಕಲೆ ಕಲಿಯಲು ಆಗಮಿಸಿರುವ ಎನ್ಎಸ್ಡಿ ವಾರಾಣಸಿಯ 11 ವಿದ್ಯಾರ್ಥಿಗಳು ಹಾಗೂ 9 ವಿದ್ಯಾರ್ಥಿನಿಯರು ಮತ್ತು ಯಕ್ಷಗುರು ಸಂಜೀವ ಸುವರ್ಣ ಪಾಲ್ಗೊಂಡಿದ್ದರು.
ಸುಬ್ರಹ್ಮಣ್ಯ ಪ್ರಸಾದ್ ಯಕ್ಷಗಾನ ಶೈಲಿಯಲ್ಲಿ ಗಣಪತಿ ಸ್ತುತಿ ಹಾಡಿ, ಪ್ರಾರ್ಥಿಸಿದರು. ಮಠದ ಆಡಳಿತಾಧಿಕಾರಿ ಗೋವಿಂದರಾಜ್ ಸ್ವಾಗತಿಸಿದರು. ಮಣಿಪಾಲದ ಪಶುವೈದ್ಯಾಧಿಕಾರಿ ಡಾ. ಪ್ರಶಾಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.