

ಉಡುಪಿ: ಜೀವನದ ಕಷ್ಟ-ಸುಖಗಳ ಸರಣಿ ದೂರವಾಗಬೇಕಾದರೆ ವ್ಯಾಸರ ಪದತಲದಲ್ಲಿ ಚಿತ್ತವನ್ನಿಡಬೇಕು. ಇದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಅದಮಾರು ಮಠದ ಆನಂದವನದಲ್ಲಿ ಡಾ. ಶತಾವಧಾನಿ ಉಡುಪಿ ರಾಮನಾಥ ಆಚಾರ್ಯರ ನೂತನಕೃತಿ ಕೃಷ್ಣ ಸಮೀಕ್ಷಾ- ಲೋಕಾರ್ಪಣೆಗೊಳಿಸಿ ಅಶೀರ್ವಚನ ನೀಡಿದರು.
ಧಾರ್ಮಿಕ ಚಿಂತನೆಗಳಲ್ಲಿ ಜನರು ಹೆಚ್ಚು ತೊಡಗಿಸಿಕೊಳ್ಳಬೇಕು ಎಂಬುದು ಆನಂದವನ ನಿರ್ಮಾಣದ ಉದ್ದೇಶ. ಶಾಸ್ತ್ರ ಪ್ರವಚನದಲ್ಲಿ ಪ್ರವಾಹದಲ್ಲಿ ಆಸ್ತಿಕರು ಮಿಂದೆದ್ದು ಪುನೀತರಾಗಬೇಕು ಎಂದು ಹೇಳಿದರು.
ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿದ್ದರು. ಡಾ.ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ ಉಪನ್ಯಾಸ ನೀಡಿದರು. ಕುತ್ಪಾಡಿ ಕೃಷ್ಣರಾಜ ಭಟ್ ಕೃತಿ ಪರಿಚಯಿಸಿದರು. ಲಕ್ಷ್ಮೀಶ ಭಟ್ ಮುದರಂಗಡಿ ಕಾರ್ಯಕ್ರಮ ನಿರೂಪಿಸಿದರು. ನಂತರ ಶ್ರೀನಿವಾಸ ಪೆಜತ್ತಾಯ ತಂಡದವರಿಂದ ದ್ವಾದಶ ಸ್ತೋತ್ರಗಳ ಹಾಡುಗಾರಿಕೆ ನಡೆಯಿತು.