

ಮಂಡ್ಯ: ಆಡಳಿತದಲ್ಲಿ ಸುಧಾರಣೆ ಮಾಡಬೇಕಿರುವ ಅಗತ್ಯತೆ ಕುರಿತು ಸರ್ಕಾರಕ್ಕೆ ಐದು ವರದಿ ಸಲ್ಲಿಸಿದೆ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಅಧ್ಯಕ್ಷರೂ ಆದ ನಿವೃತ್ತ ಐಎಎಸ್ ಟಿ.ಎಂ.ವಿಜಯ್‌ಭಾಸ್ಕರ್ ತಿಳಿಸಿದರು.
ನಗರದ ವಾಣಿಜ್ಯ ತೆರಿಗೆ ಇಲಾಖೆಗೆ ಭೇಟಿ ನೀಡಿ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಕೆಲಸ ಹಾಗೂ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ನಂತರ ಮಾತನಾಡಿದರು. ಆಯೋಗ-2 ವಿವಿಧ ಇಲಾಖೆಗಳಿಗೆ ಭೇಟಿ ನೀಡುವುದರ ಜತೆಗೆ ಇಲಾಖೆಗಳ ಕಾರ್ಯವೈಖರಿಗಳ ಬಗ್ಗೆ ತಿಳಿದುಕೊಂಡು ಆಡಳಿತವನ್ನು ಸುಧಾರಣೆ ಮಾಡಲು ಬೇಕಿರುವ ಅಗತ್ಯತೆಗಳ ಬಗ್ಗೆ ಸರ್ಕಾರಕ್ಕೆ ವರದಿಗಳನ್ನು ಸಲ್ಲಿಸಿದೆ ಎಂದು ಹೇಳಿದರು.
ಆಯೋಗವು ಈಗಾಗಲೇ 23 ಸರ್ಕಾರಿ ಇಲಾಖೆಗಳಿಗೆ ಭೇಟಿ ನೀಡಿ ಕಾರ್ಯವೈಖರಿಗಳನ್ನು ಪರಿಶೀಲಿಸಿ ಅವರಿಂದ ಸಮಸ್ಯೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸಿದೆ. ಈ ನಿಟ್ಟಿನಲ್ಲಿ ಆಯೋಗವು ಅಧ್ಯಯನ ನಡೆಸಿ ಅನೇಕ ಶಿಫಾರಸುಗಳನ್ನು ಮಾಡಿದೆ. ಇನ್ನೂ 16 ಇಲಾಖೆಗಳಿಗೆ ಆಯೋಗ ಭೇಟಿ ನೀಡಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡುವುದು ಬಾಕಿ ಇದೆ ಎಂದರು.
ಆಯೋಗದ ಸಲಹೆಗಾರ ನಿವೃತ್ತ ಐಎಎಸ್ ಪ್ರಸನ್ನಕುಮಾರ್, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಬಾಲಸುಬ್ರಹ್ಮಣ್ಯ, ಸಹಾಯಕ ಆಯುಕ್ತ ಜಿ.ಎಚ್.ಪ್ರಸನ್ನಕುಮಾರ್, ಕಲ್ಯಾಣ್‌ಕುಮಾರ್, ವಾಣಿಜ್ಯ ತೆರಿಗೆ ಅಧಿಕಾರಿ ಮಹದೇವ, ನಾಗೇಂದ್ರ, ಚಂದ್ರಶೇಖರ್ ಉಪಸ್ಥಿತರಿದ್ದರು.
ಆಯೋಗ ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶ, ಸಣ್ಣ ನೀರಾವರಿ ವಿಭಾಗ ಮತ್ತು ಉಪವಿಭಾಗೀಯ ಕಚೇರಿ, ಪಾಂಡವಪುರ ತಾಲೂಕು ಖಜಾನೆ, ತಾಲೂಕು ಮಟ್ಡದ ಅಂಕಿ ಅಂಶಗಳ ನಿರೀಕ್ಷಕರ ಕಚೇರಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಭೇಟಿ ನೀಡಿತು. ಅಂತೆಯೇ 24ರಂದು ಜಿಲ್ಲಾ ಅಂಕಿ ಅಂಶಗಳ ಸಂಗ್ರಹಣಾಧಿಕಾರಿ ಕಚೇರಿ, ಜಿಲ್ಲಾ ಖಜಾನೆ, ಮಾಲಿನ್ಯ ನಿಯಂತ್ರಣ ಮಂಡಳಿ, ನಾಗಮಂಗಲ ಎಚ್‌ಎಲ್ಬಿಸಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಆಡಳಿತ ಸುಧಾರಣೆಗಳ ಬಗ್ಗೆ ಸಲಹೆಗಳನ್ನು ಪಡೆಯಲಿದೆ.