ಜುಲೈ 12ರಂದು ರಾಷ್ಟ್ರೀಯ ಲೋಕ್ ಅದಾಲತ್

Published on

ಪುತ್ತೂರು: ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಪುತ್ತೂರು ನ್ಯಾಯಾಲಯದಲ್ಲಿ ಜುಲೈ ೧೨ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದ್ದು, ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶ. ಪುತ್ತೂರಿನ ೬ ನ್ಯಾಯಾಲಯದಲ್ಲಿ ೭ ಸಾವಿರಕ್ಕೂ ಅಧಿಕ ಪ್ರಕರಣ ಇತ್ಯರ್ಥಗೊಳಿಸುವ ಗುರಿ ಹೊಂದಲಾಗಿದೆ ಎಂದು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣಪುರ ಹೇಳಿದರು.

ರಾಜಿ ಸಂಧಾನ ಮಾಡಿ ಪ್ರಕರಣಗಳನ್ನು ಇತ್ಯರ್ಥ ಮಾಡುವುದರಿಂದ ಹಣ ಮತ್ತು ಸಮಯದ ಉಳಿತಾಯ ಮಾನಸಿಕ ನೆಮ್ಮದಿ ಮತ್ತು ತ್ವರಿತ ನ್ಯಾಯಾದಾನ ಆಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅದಾಲತ್‌ನಲ್ಲಿ ಹೆಚ್ಚಿನ ಪ್ರಕರಣಗಳು ಇತ್ಯರ್ಥವಾಗಲು ಎಲ್ಲರ ಸಹಕಾರದ ಅಗತ್ಯವಿದ್ದು, ಹಣಕಾಸು ಸಂಸ್ಥೆಗಳು, ಪೊಲೀಸ್, ಆರ್‌ಟಿಒ, ನಗರಸಭೆ ಅಧಿಕಾರಿಗಳು, ತಹಸೀಲ್ದಾರ್, ವಕೀಲರು, ಇನ್ಶೂರೆನ್ಸ್ ಕಂಪನಿಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದರು.

ಹಣಕಾಸು ಸಂಸ್ಥೆಗಳ ಚೆಕ್ ಬೌನ್ಸ್ ಪ್ರಕರಣವೇ ಸುಮಾರು ೩ ಸಾವಿರದಷ್ಟು ಇದೆ. ವ್ಯಾಜ್ಯ ಪೂರ್ವ ಪ್ರಕರಣ (ಪಿಎಲ್‌ಸಿ)ವನ್ನು ಹೆಚ್ಚು ದಾಖಲಿಸಿಕೊಂಡಾಗ ಶೂನ್ಯ ಶುಲ್ಕದಲ್ಲಿ ನ್ಯಾಯ ಹೊರೆಯುತ್ತದೆ ಮತ್ತು ಅದಾಲತ್ ಮೂಲಕ ಇತ್ಯರ್ಥ ಮಾಡಿಕೊಳ್ಳಬಹುದು.ಬ್ಯಾಂಕಿಂಗ್ ವ್ಯವಸ್ಥೆಯವರಿಗೆ ಹಾಗೂ ಆರ್‌ಟಿಒದವರಿಗೆ ಈ ರೀತಿಯಲ್ಲಿ ಪ್ರಕರಣ ದಾಖಲಿಸುವುದಕ್ಕೆ ಅವಕಾಶಗಳೂ ಇದೆ. ಅದಾಲತ್‌ನಲ್ಲಿ ಇತ್ಯರ್ಥವಾದ ಪ್ರಕರಣದ ನ್ಯಾಯಾಲಯದ ಶುಲ್ಕವನ್ನು ಹಿಂದಿರುಗಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ನ್ಯಾಯಾಧಿಶರಾದ ಶಿವಣ್ಣ ಎಚ್. ಆರ್., ಯೋಗೇಂದ್ರ ಶೆಟ್ಟಿ, ಪುತ್ತೂರು ವಕೀಲರ ಸಂಘ ಅಧ್ಯಕ್ಷ ಜಿ.ಜಗನ್ನಾಥ ರೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net