ಅದಾಲತ್‌ನಲ್ಲಿ ಮೂಡಿದ ಭರವಸೆಯ ಬೆಳಕು : ಪುತ್ರಿಯ ಥಲಸ್ಸೇಮಿಯಾ ಚಿಕಿತ್ಸೆಗೆ ನೆರವು : ಕುಟುಂಬಕ್ಕೆ ಮನೆ, ಇತರ ಸೌಲಭ್ಯ

New Project (14)
Published on

ಪುರುಷೋತ್ತಮ ಪೆರ್ಲ ಕಾಸರಗೋಡು

ವಾಸ್ತವ್ಯಕ್ಕೆ ಸ್ವಂತ ಮನೆಯಿಲ್ಲ, ಕಾಯಿಲೆಯಿಂದ ಬಳಲುತ್ತಿರುವ ಪುತ್ರಿ ಸೇರಿದಂತೆ ಇಬ್ಬರು ಎಳೆಯ ಮಕ್ಕಳು, ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸ. ದಯನೀಯ ಸ್ಥಿತಿಯಲ್ಲಿರುವ ಹರೀಶ ಎಂಬುವರ ಕುಟುಂಬಕ್ಕೆ ಕೇರಳ ಸರ್ಕಾರ ನಡೆಸುತ್ತಿರುವ ಅದಾಲತ್ ಭರವಸೆಯ ಬೆಳಕಾಗಿದ್ದು, ಕಾಟಾಚಾರಕ್ಕಲ್ಲದೆ ಜನಸ್ನೇಹಿಯಾಗಿ ಯೋಜನೆಗಳು ಕೆಲಸ ಮಾಡಿದಾಗ ನಾಗರಿಕರಿಗೆ ಹೇಗೆ ಸಹಾಯವಾಗುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಎಣ್ಮಕಜೆ ಪಂಚಾಯಿತಿ ಬಜಕೂಡ್ಲಿನಲ್ಲಿ ವಾಸಿಸುತ್ತಿರುವ ಹರೀಶ್-ಸಂಧ್ಯಾಸರಸ್ವತಿ ದಂಪತಿಯ ಏಳರ ಹರೆಯದ ಪುತ್ರಿ ಬಬಿತಾ ಥಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದು, ಪುತ್ರಿಯ ಚಿಕಿತ್ಸೆಗಾಗಿ ದಂಪತಿ ಸಾವಿರಾರು ರೂ. ಖರ್ಚುಮಾಡಿದ್ದಾರೆ. ದೇಹದಲ್ಲಿ ಸಾಕಷ್ಟು ಹಿಮೋಗ್ಲೋಬಿನ್ ಉತ್ಪಾದನೆಯಾಗದ ಕಾರಣ ತಿಂಗಳಲ್ಲಿ ಒಂದರಿಂದ ಎರಡು ಬಾರಿ ಮಗುವಿಗೆ ರಕ್ತ ನೀಡುವ ವ್ಯವಸ್ಥೆಯಾಗಬೇಕು. ಒಂದೆಡೆ ಮಗುವಿನ ಚಿಕಿತ್ಸಾ ವೆಚ್ಚ, ಇನ್ನೊಂದೆಡೆ ವಾಸ್ತವ್ಯಕ್ಕೆ ಸ್ವಂತ ಮನೆಯಿಲ್ಲದಿರುವುದು, ಕುಟುಂಬ ಪೋಷಣೆ ಜವಾಬ್ದಾರಿ ಇವೆಲ್ಲವೂ ಹರೀಶ್ ಅವರನ್ನು ಅಧೀರರನ್ನಾಗಿಸಿತ್ತು.

ಈ ಮಧ್ಯೆ ಮಂಜೇಶ್ವರ ತಾಲೂಕಲ್ಲಿ ಸಚಿವ ಕಡನ್ನಪಳ್ಳಿ ರಾಮಚಂದ್ರನ್ ಉಸ್ತುವಾರಿಯಲ್ಲಿ ನಡೆದ ಅದಾಲತ್ ಹರೀಶ್ ಕುಟುಂಬಕ್ಕೆ ಒಂದಷ್ಟು ಭರವಸೆಯ ಬೆಳಕನ್ನು ಹರಿಸಿದೆ. ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯೆ ಸೌದಾಬಿ ಹನೀಫ್ ನೇತೃತ್ವದಲ್ಲಿ ಹರೀಶ್ ಕುಟುಂಬಕ್ಕೆ ಎಣ್ಮಕಜೆ ಪಂಚಾಯಿತಿಯ ಕುರಡ್ಕ ಪ್ರದೇಶದಲ್ಲಿ ವಾಸ್ತವ್ಯಕ್ಕೆ ಮನೆಯೊಂದನ್ನು ಬಾಡಿಗೆಯಿಲ್ಲದೆ ನೀಡಲು ವ್ಯವಸ್ಥೆ ಕಲ್ಪಿಸಿದ್ದಾರೆ. ಜತೆಗೆ ಬಾಲಕಿಯನ್ನು ಅದಾಲತ್‌ಗೆ ಕರೆದೊಯ್ದು, ಕುಟುಂಬದ ದಯನೀಯ ಅವಸ್ಥೆಯನ್ನು ಸಚಿವರಿಗೆ ಮನವರಿಗೆ ಮಾಡಿದ್ದಾರೆ. ಮನೆಗೆ ವಿದ್ಯುತ್ ಸಂಪರ್ಕ, ರೇಷನ್ ಕಾರ್ಡ್ ಜತೆಗೆ ಅಂಗವಿಕಲ ಸರ್ಟಿಫಿಕೆಟ್ ಒದಗಿಸಲು ಸಚಿವರು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದ್ದು, ಇಂದು ಇವೆಲ್ಲವೂ ಕುಟುಂಬಕ್ಕೆ ಲಭ್ಯವಾಗಿದೆ. ಇನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿ ರಕ್ತ ನೀಡುವುದರ ಬದಲು ಕಾಸರಗೋಡಿನ ಸರ್ಕಾರಿ ಆಸ್ಪತ್ರೆಯಲ್ಲೇ ವ್ಯವಸ್ಥೆ ಕಲ್ಪಿಸಲಾಗಿದೆ. ವೈದ್ಯರ ಪ್ರಕಾರ ಬಾಲಕಿ ಅನಾರೋಗ್ಯ ಕಾಯಂ ಆಗಿ ವಾಸಿಯಾಗಲು ಮೂಳೆ ಮಜ್ಜೆಯ ಕಸಿ(ಬಿಎಂಟಿ) ಚಿಕಿತ್ಸೆ ಅನಿವಾರ್ಯವಾಗಿದ್ದು, ಇದಕ್ಕೆ 15 ಲಕ್ಷ ರೂ. ವೆಚ್ಚ ತಗಲುತ್ತದೆ. ಇದಕ್ಕಾಗಿ ಕೋಯಿಕ್ಕೋಡಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವ್ಯವಸ್ಥೆಯನ್ನೂ ನಡೆಸಲಾಗುತ್ತಿದೆ.

ಕುಟುಂಬದ ದಯನೀಯ ಪರಿಸ್ಥಿತಿ ಮನ ಕಲಕುತ್ತಿದೆ. ಸಂಕಷ್ಟದಲ್ಲಿರುವ ಕುಟುಂಬಕ್ಕೆ ಬಾಡಿಗೆಯಿಲ್ಲದೆ ತಾತ್ಕಾಲಿಕವಾಗಿ ಮನೆ ಒದಗಿಸಲಾಗಿದೆ. ಸರ್ಕಾರ ನಡೆಸುವ ಅದಾಲತ್ ಈ ಕುಟುಂಬಕ್ಕೆ ಒಂದಷ್ಟು ಪ್ರಯೋಜನಕಾರಿಯಾಗಿದ್ದು, ಬಾಲಕಿ ಪೂರ್ಣ ಗುಣಮುಖವಾಗುವ ನಿಟ್ಟಿನಲ್ಲಿ ಚಿಕಿತ್ಸೆಗೂ ನೆರವಾಗಬೇಕಾಗಿದೆ. ಸೌದಾಬಿ ಹನೀಫ್, ಸದಸ್ಯೆ ಎಣ್ಮಕಜೆ ಗ್ರಾಮ ಪಂಚಾಯಿತಿ https://www.vijayavani.net/national-symposium-at-sri-ram-vidya-kendra-kalladka https://www.vijayavani.net/wp-admin/post.php?post=2618698&action=edit

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net