

ಎನ್.ಆರ್.ಪುರ: ತಾಲೂಕಿನ ನಾಗಲಾಪುರ ಗ್ರಾಮ ಪಂಚಾಯಿತಿಗೆ ಸೇರಿದ ಹಿಳುವಳ್ಳಿಯ ಸಮೀಪ ಎಸ್.ಆರ್.ರಂಗಪ್ಪ ಅವರ ಅಡಕೆ ತೋಟಕ್ಕೆ ಬುಧವಾರ ರಾತ್ರಿ 18ರಿಂದ 20 ಕಾಡಾನೆಗಳ ಹಿಂಡು ದಾಳಿ ಮಾಡಿ 50ಕ್ಕೂ ಹೆಚ್ಚು ಸಲು ಬರುತ್ತಿರುವ ಅಡಕೆ ಮರಗಳನ್ನು ನಾಶ ಮಾಡಿದೆ.
ರಾತ್ರಿ ಒಂದು ಗಂಟೆ ವೇಳೆಗೆ ಬಂದ ಕಾಡಾನೆಗಳು ಬೆಳಗಿನವರೆಗೂ ತೋಟದಲ್ಲೇ ಇದ್ದು ಬೆಳಗಿನ ಜಾವದ ನಂತರ ತೋಟ ಬಿಟ್ಟು ಸಮೀಪದ ಕಾಡು ಸೇರಿಕೊಂಡಿದೆ. ಕಳೆದ ಒಂದು ವಾರದಿಂದಲೂ ಹಿಳುವಳ್ಳಿ ಗ್ರಾಮದಲ್ಲಿ ಕಾಡಾನೆಗಳು ಅಡಕೆ ತೋಟಗಳ ಮೇಲೆ ದಾಳಿ ಮಾಡುತ್ತಿದೆ. ತರಿಯನ್ ಎಂಬುವವರ ರಬ್ಬರ್‌ತೋಟದಲ್ಲೂ ರಬ್ಬರ್‌ಗಿಡಗಳನ್ನು ನಾಶ ಮಾಡಿದೆ. ಈ ಭಾಗದಲ್ಲಿ ಆನೆಗಳು ನಡೆದಿದ್ದೇ ದಾರಿ ಎಂಬುವಂತಾಗಿದೆ.
ಅರಣ್ಯ ಇಲಾಖೆಯವರು ಡ್ರೋಣ್ ಕಾರ್ಯಾಚರಣೆ ನಡೆಸಿ ಆನೆಗಳನ್ನು ಓಡಿಸಿದ್ದರು. ಆದರೆ, ಎರಡು ದಿನದಲ್ಲೇ ಮತ್ತೆ ಕಾಡಾನೆಗಳು ವಾಪಾಸು ಹಿಳುವಳ್ಳಿ ಗ್ರಾಮದ ಕಾಡಿಗೆ ಬಂದಿದೆ. ಆದ್ದರಿಂದ ಮುಂದಿನ ಬಾರಿ ಡ್ರೋನ್ ಕಾರ್ಯಾಚರಣೆ ಮಾಡಿ ಭದ್ರಾ ಹಿನ್ನೀರು ದಾಟಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮೆಣಸೂರು ಗ್ರಾಪಂ ಸದಸ್ಯ ಎನ್.ಡಿ.ಪ್ರಸಾದ್ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.