ಅಡಕೆ ವ್ಯಾಪಾರಿಗೆ ಗುಂಡೇಟು ತಗುಲಿ ಗಾಯ

gundetu
gundetu
Published on

ಮಂಜೇಶ್ವರ: ದಾರಿಯಲ್ಲಿ ನಡೆದು ಸಾಗುತ್ತಿದ್ದ ಅಡಕೆ ವ್ಯಾಪಾರಿಗೆ ಗುಂಡೇಟು ತಗುಲಿರುವ ಘಟನೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ ಗಡಿಭಾಗ ಮುಡಿಪು ಸಮೀಪದ ಕಜೆಪದವು ಎಂಬಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.

ಬಾಕ್ರಬೈಲ್ ನಡೀಬೈಲು ನಿವಾಸಿ ಸವಾದ್(20) ಎಂಬಾತ ಶೂಟೌಟ್ ತಗುಲಿ ಗಾಯಗೊಂಡವರು. ಭಾನುವಾರ ಸಂಜೆ ವೇಳೆ ಕಾಡಿನ ನಡುವೆ ದಾರಿಯಲ್ಲಿ ತೆರಳುವ ಸಂದರ್ಭ ಕಜೆಪದವು ತಿರುವಿನಲ್ಲಿ ಈ ಘಟನೆ ನಡೆದಿದೆ. ಇದರಿಂದ ಕಾಲಿಗೆ ಗಂಭೀರ ಗಾಯಗೊಂಡ ಸಾವಾದ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಾಣಿ ಬೇಟೆ ಬಂದವರು ಹಂದಿಗೆ ಗತಿ ಕಾಣಿಸಲು ಹಾದಿಯಲ್ಲೇ ಸ್ಫೋಟಕ ವಸ್ತು ಇರಿಸಿದ್ದರು ಎನ್ನಲಾಗಿದೆ. ಇದನ್ನು ಗಮನಿಸದ ಸವಾದ್ ನಡಕೊಂಡು ಸಾಗುವ ವೇಳೆ ಮೆಟ್ಟಿದ ಕಾರಣ ಅವರಿಗೆ ತಗುಲಿರುವ ಸಾಧ್ಯತೆ ಇದೆ. ಇದರಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೂಟೌಟ್ ಮಾಡಿದ ವ್ಯಕ್ತಿಯ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.

ಮಂಜೇಶ್ವರ ಠಾಣಾ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಜಿಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net