

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಲಾಭ ಇಲ್ಲವೆಂದು ಯುವ ಸಮುದಾಯ ನಗರ ಪ್ರದೇಶಗಳಲ್ಲಿ 10-20 ಸಾವಿರ ಸಂಬಳಕ್ಕೆ ಖಾಸಗಿ ಕಂಪನಿಗಳಲ್ಲಿ ದುಡಿಯುತ್ತಿದ್ದಾರೆ, ಕೆಲವು ರೈತರು ಕೇವಲ ಒಂದೇ ಬೆಳೆ ಬೆಳೆದು ಸಾಲಗಾರರಾಗುತ್ತಿದ್ದಾರೆ.
ಆದರೆ, ಜಿಲ್ಲೆಯ ರೈತರೊಬ್ಬರು ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಕೃಷಿಯಲ್ಲಿ ಸಮಗ್ರ ಬೆಳೆ ಬೆಳೆದು ಪ್ರಗತಿ ಸಾಧಿಸಿದ್ದಾರೆ.
ದಾವಣಗೆರೆ ತಾಲೂಕು ಆನಗೋಡು ಹೋಬಳಿ ಸಿದ್ದನೂರು ಗ್ರಾಮದ ಪ್ರಗತಿಪರ ಕೃಷಿಕ ಎಸ್.ಜಿ. ಶಾಂತನಗೌಡ ಮತ್ತು ಅವರ ಪುತ್ರ ಜಿ.ಎಸ್. ಹರೀಶ್ ಕೃಷಿ ಹಾಗೂ ತೋಟಗಾರಿಕೆಯಲ್ಲಿ ಬಹುಬೆಳೆ ಬೆಳೆದಿದ್ದಾರೆ. ಶಾಂತನಗೌಡ ಅವರ 12 ಎಕರೆ ಜಮೀನಿನಲ್ಲಿ 7 ಎಕರೆ ಅಡಕೆ ತೋಟವಿದೆ. ಅದರಲ್ಲಿ 6 ಎಕರೆ ತೋಟ ಫಲ ನೀಡುತ್ತಿದ್ದು, 1.5 ಎಕರೆಯಲ್ಲಿ 3 ವರ್ಷದ ಸಣ್ಣ ಅಡಕೆ ಗಿಡಗಳಿವೆ. ಇವುಗಳ ನಡುವೆ ಮಿಶ್ರ ಬೆಳೆಯಾಗಿ 1 ಸಾವಿರ ಪಪ್ಪಾಯ ಗಿಡ, 2 ಎಕರೆ ಸಪೋಟ, 1 ಸಾವಿರ ಶ್ರೀಗಂಧದ ಗಿಡ, 40 ರಕ್ತಚಂದನ ಗಿಡಗಳನ್ನು ಬೆಳೆದಿದ್ದಾರೆ.
ನೀರಾವರಿ ವ್ಯವಸ್ಥೆ: ಅಡಕೆ ತೋಟದಲ್ಲಿ ಅಂತರ್ ಬೆಳೆಯಾಗಿರುವ ಶ್ರೀಗಂಧ, ಪಪ್ಪಾಯ, ರಕ್ತ ಚಂದನ ಹಾಗೂ ಸಪೋಟ ಗಿಡಗಳಿಗೆ ಒಟ್ಟು 8 ಬೋರ್ವೆಲ್ ನೀರಾವರಿ ವ್ಯವಸ್ಥೆ ಮಾಡಿದ್ದು, ತೋಟದಲ್ಲಿ ನಿರ್ವಿುಸಿರುವ ಕೃಷಿ ಹೊಂಡಕ್ಕೆ ನೀರನ್ನು ತುಂಬಿಸಿ, ನಂತರ ಡ್ರಿಪ್ ಮೂಲಕ ಬೆಳೆಗಳಿಗೆ ನೀರನ್ನು ಬಿಡಲಾಗುತ್ತದೆ.
ಅಲ್ಲದೆ ನೀರಿನ ಶುದ್ಧೀಕರಣ ಘಟಕವನ್ನು ಸಹ ಹಾಕಿಸಿದ್ದು, ಸೋಲಾರ್ ಅಳವಡಿಕೆ ಮಾಡಲಾಗಿದೆ. ಎಲ್ಲ ಬೋರ್ವೆಲ್ಗಳು ಸೋಲಾರ್ ವಿದ್ಯುತ್ನಿಂದ ನೀರನ್ನು ಹೊರ ಹಾಕುತ್ತಿವೆ.
ಸಾವಯವ ಪದ್ಧತಿ: ಜೀವಾಮೃತ, ಗೋಕೃಪಾಮೃತ ಮತ್ತು ಮನೆಯ ಹಿತ್ತಲಿನಲ್ಲಿ ಕೃಷಿ ಇಲಾಖೆಯ ಮಾರ್ಗದರ್ಶನದೊಂದಿಗೆ ಎರೆಹುಳು ತೊಟ್ಟಿ ನಿರ್ವಿುಸಲಾಗಿದೆ. ಉತ್ತಮ ಎರೆಹುಳು ಗೊಬ್ಬರವನ್ನು ನಾವೇ ತಯಾರು ಮಾಡಿ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳಿಗೆ ಹಾಕುತ್ತೇವೆ. ಯಾವುದೇ ರೀತಿಯ ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ರೈತರು ಸುಧಾರಿತ ಕೃಷಿ ಮಾಡಿದರೆ ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ಗಳಿಸಬಹುದು ಎನ್ನುತ್ತಾರೆ ಶಾಂತನಗೌಡ.
ವಾರ್ಷಿಕ ಖರ್ಚು ಮತ್ತು ಆದಾಯ: ಅಡಕೆ, ಸಪೋಟ, ಪಪ್ಪಾಯ ಹಾಗೂ ಇತರ ಎಲ್ಲ ಬೆಳೆಗಳಿಂದ ವಾರ್ಷಿಕ ಸರಾಸರಿ 20 ರಿಂದ 22 ಲಕ್ಷ ಆದಾಯ ಲಭಿಸುತ್ತಿದ್ದು, ಇದರಲ್ಲಿ 4 ರಿಂದ 5 ಲಕ್ಷ ರೂ. ಖರ್ಚು ಬರುತ್ತಿದೆ ಎನ್ನುತ್ತಾರೆ ಹರೀಶ್.
ಪ್ರಶಸ್ತಿ ಪುರಸ್ಕಾರ: ಎಸ್.ಜಿ. ಶಾಂತನಗೌಡ ಅವರಿಗೆ 2022 - 23ನೇ ಸಾಲಿನ ಕೃಷಿ ಇಲಾಖೆಯ ಆತ್ಮಯೋಜನೆಯಲ್ಲಿ ತಾಲೂಕಿನ ಶ್ರೇಷ್ಠ ಕೃಷಿಕ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಜಿ.ಎಸ್. ಶಾಂತನಗೌಡ ಅವರು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆದು, ಕೃಷಿ ಲಾಭದಾಯಕ ಎಂದು ತೋರಿಸಿಕೊಟ್ಟಿದ್ದಾರೆ. ಜತೆಗೆ ಉತ್ತಮವಾಗಿ ನೀರು ನಿರ್ವಹಣೆ ಮಾಡುತ್ತಿದ್ದಾರೆ. ಇವರಂತೆ ಎಲ್ಲ ರೈತರು ಬಹುಬೆಳೆ ಪದ್ಧತಿ ಅಳವಡಿಸಿಕೊಂಡು ಆರ್ಥಿಕ ಸಬಲರಾಗಬೇಕು. -ಡಿ.ಎಂ. ಶ್ರೀಧರಮೂರ್ತಿ, ಸಹಾಯಕ ಕೃಷಿ ನಿರ್ದೇಶಕ, ಕೃಷಿ ಇಲಾಖೆ, ದಾವಣಗೆರೆ.