ಅಡಕೆ ತೋಟಕ್ಕೆ ಬೆಂಕಿ ತಗುಲಿ ಗಿಡಗಳು ನಾಶ

02 JLR
Published on

ಜಗಳೂರು: ತಾಲೂಕಿನ ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಐನಹಳ್ಳಿ ಗ್ರಾಮದ ಬಳಿ ಅಡಕೆ ತೋಟಕ್ಕೆ ಬೆಂಕಿ ತಗುಲಿ ನೂರಾರು ಗಿಡಗಳು ನಾಶವಾಗಿರುವ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.

ಮುಷ್ಟಿಗರಹಳ್ಳಿ ಗ್ರಾಮದ ಕೆಂಚಪ್ಪ ಅವರ ಅಡಕೆ ತೋಟಕ್ಕೆ ಬೆಂಕಿ ತಗುಲಿದ್ದು, 300 ಕ್ಕೂ ಹೆಚ್ಚು ಅಡಕೆ, ತೆಂಗಿನ ಗಿಡಗಳು ಸುಟ್ಟಿವೆ.

ಅಪರೂಪದ ಕೊಂಡುಕುರಿ ಅರಣ್ಯಧಾಮಕ್ಕೆ ಕಿಡಿಗೇಡಿಗಳು ಹಚ್ಚಿದ ಬೆಂಕಿ ಕಾಡಂಚಿನ ಅಡಕೆ ತೋಟಕ್ಕೆ ತಗುಲಿದೆ. ಇದರಿಂದ ನೀರು ಹರಿಸುವ ಪೈಪ್​ಗಳು, ಬೋರ್​ವೆಲ್ ಕೇಬಲ್ ವೈರ್ ಸೇರಿ ಅನೇಕ ಕೃಷಿ ಉಪಕರಣ ಸುಟ್ಟು ಹೋಗಿವೆ ಎಂದು ರೈತ ಕೆಂಚಪ್ಪ ಅಳಲು ತೋಡಿಕೊಂಡರು.

ರಂಗಯ್ಯನ ದುರ್ಗ ಕಾಡಿಗೆ ಫೈರ್​ಲೈನ್ ಮಾಡಿದ್ದ ಕಾರಣ ಅರಣ್ಯಕ್ಕೆ ಸ್ವಲ್ಪ ಪ್ರಮಾಣದಲ್ಲಿ ವ್ಯಾಪಿಸಿದೆ. ಸಕಾಲಕ್ಕೆ ಸ್ಥಳದಲ್ಲಿದ್ದ ಸುತ್ತಮುತ್ತಲ ಜಮೀನುಗಳ ರೈತರು ಸೇರಿ ಬೆಂಕಿ ನಂದಿಸಿದ್ದರಿಂದ 2250 ಗಿಡದ 3 ಎಕರೆ ತೋಟದಲ್ಲಿ 300 ಗಿಡಗಳು ಸುಟ್ಟು ಹೋಗಿವೆ.

ಅರಣ್ಯ ಸಿಬ್ಬಂದಿ ಕಿಡಿಗೇಡಿಗಳನ್ನು ಪತ್ತೆ ಹಚ್ಚಬೇಕು. ಬೇಟೆಗಾರರು ಕಾಡುಪ್ರಾಣಿಗಳನ್ನು ಕೊಲ್ಲಲು ಬಂದಾಗ ಇಂತಹ ಕೃತ್ಯವೆಸಗಿರಬಹುದು. ಅರಣ್ಯ ಸಿಬ್ಬಂದಿ ಬೇಸಿಗೆ ಕಾಲದಲ್ಲಿ ಇಂತಹ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net