ಅಡಕೆ ಬೆಳೆ ನಿಯಂತ್ರಣ ಅಸಾಧ್ಯ

6sgr1
ಅಪ್ಸ್‌ಕೋಸ್ ಸುವರ್ಣ ಮಹೋತ್ಸವವನ್ನು ಕೆ.ಎನ್.ರಾಜಣ್ಣ ಉದ್ಘಾಟಿಸಿದರು. ಬಿ.ವೈ.ರಾಘವೇಂದ್ರ, ಗೋಪಾಲಕೃಷ್ಣ ಬೇಳೂರು, ಕಾಗೋಡು ತಿಮ್ಮಪ್ಪ, ಬಿ.ಸ್ವಾಮಿರಾವ್, ಆರ್.ಎಂ.ಮಂಜುನಾಥ ಗೌಡ, ಕೆ.ಎಂ.ಸೂರ್ಯನಾರಾಯಣ ಇತರರಿದ್ದರು.
Published on

ಸಾಗರ: ಸಹಕಾರಿ ಸಂಸ್ಥೆಗಳು ನಂಬಿಕೆಯ ಆಧಾರದ ಮೇಲೆ ನಡೆದುಕೊಂಡು ಬಂದಿದ್ದು ಅದನ್ನು ವ್ಯವಸ್ಥಿತವಾಗಿ ಕಟ್ಟುವಲ್ಲಿ ಶಿವಮೊಗ್ಗ ಜಿಲ್ಲೆಯು ಗಮನಾರ್ಹ ಪಾತ್ರ ವಹಿಸಿವೆ. ಬರುವ ಡಿಸೆಂಬರ್ ಒಳಗೆ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿಯೂ ಸಹಕಾರಿ ಸಂಘಟನೆಗಳನ್ನು ಆರಂಭಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದ ಆರ್ಯ ಈಡಿಗರ ಸಭಾಭವನದಲ್ಲಿ ಭಾನುವಾರ ಆಪ್ಸ್‌ಕೋಸ್ (ಅಡಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ) ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿ ಸಹಕಾರ ಸಂಘದ ಮೂಲಕ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವ ಮೂಲಕ ರೈತರ ಆರ್ಥಿಕ ಸದೃಢತೆಗೆ ಶ್ರಮಿಸಲಾಗುತ್ತದೆ ಎಂದರು.
ಪ್ರಸ್ತುತ ದಿನಗಳಲ್ಲಿ ಅಡಕೆ ಬೆಳೆ ವ್ಯಾಪಿಸಿಕೊಳ್ಳುತ್ತಿದ್ದು ಅದನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಬೆಳೆಯ ಜತೆ ಅನೇಕ ರೋಗಬಾಧೆಗಳು ಸಹ ಬೆಳೆಗಾರರಿಗೆ ಸಮಸ್ಯೆಯುಂಟು ಮಾಡುತ್ತಿವೆ. ಕೇಂದ್ರ ಸರ್ಕಾರ ಬೇರೆಬೇರೆ ದೇಶಗಳಿಂದ ಆಮದಾಗುತ್ತಿರುವ ಅಡಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕು. ಅಡಕೆ ಮೇಲೆ ಆಮದು ಶುಲ್ಕವನ್ನು ಹೆಚ್ಚಿಸುವುದು ಸೇರಿದಂತೆ ಮಾರುಕಟ್ಟೆ ಅಭಿವೃದ್ದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದ ಅವರು, ಸಹಕಾರಿ ಸಂಸ್ಥೆಯೊಂದು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತದೆ ಎಂದರೆ ಅದರ ಹಿಂದೆ ಕೆಲಸ ಮಾಡಿದ ಆಡಳಿತ ಮಂಡಳಿ, ನೌಕರ ವರ್ಗದ ಪಾತ್ರವೂ ಸ್ಮರಣೀಯವಾದದು. ದೇಶದಲ್ಲಿ ಸಹಕಾರಿ ಸಂಸ್ಥೆಗಳು ಎಲ್ಲ ಕ್ಷೇತ್ರಗಳಲ್ಲಿ ವ್ಯಾಪಿಸಿದ್ದು ಉತ್ತಮ ಗುಣಮಟ್ಟವನ್ನು ಕಾಪಾಡುವ ಮೂಲಕ ಆರ್ಥಿಕ ಸಬಲೀಕರಣವನ್ನು ಕಾಣುತ್ತಿವೆ ಎಂದು ಹೇಳಿದರು.
ಸುವರ್ಣ ಮಹೋತ್ಸವ ಕೂಪನ್ ಬಿಡುಗಡೆ ಮಾಡಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಅಡಕೆ ಬೆಳೆ ಮತ್ತು ಬೆಲೆ ಜಿಲ್ಲೆಯ ಆರ್ಥಿಕ ಜೀವನಾಡಿಯಾಗಿದೆ. ಅಡಕೆ ಬೆಳೆಗಾರರ ಪರವಾಗಿ ಕೇಂದ್ರ ಸರ್ಕಾರವಿದೆ. ಅಡಕೆ ಕ್ಯಾನ್ಸರ್‌ಕಾರಕ ಎನ್ನುವ ವರದಿ ಬೆಳೆಗಾರ ಸಮೂಹಕ್ಕೆ ಆತಂಕ ತಂದಿತ್ತು. ಆದರೆ ಹಿಂದಿನ ಸರ್ಕಾರದ ಅವಧಿಯಲ್ಲಿ ಅಡಕೆ ಟಾಸ್ಕ್‌ಫೋರ್ಸ್ ಸ್ಥಾಪಿಸಿ ಅಡಕೆ ಕುರಿತು ವರದಿ ಬಂದಿದ್ದು ಅಡಕೆ ಕ್ಯಾನ್ಸರ್‌ಕಾರಕವಲ್ಲ, ಬದಲಾಗಿ ಕ್ಯಾನ್ಸರ್ ನಿವಾರಣೆಗೆ ಪೂರಕ ಎನ್ನುವ ಮಾಹಿತಿ ಲಭ್ಯವಾಗಿದ್ದು ಈ ನಿಟ್ಟಿನಲ್ಲಿ ಅಡಿಕೆ ಮೇಲಿನ ಅಪವಾದವನ್ನು ತೆಗೆದು ಹಾಕುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಬಿ.ಸ್ವಾಮಿರಾವ್, ಪ್ರಮುಖರಾದ ಎಚ್.ಎಲ್.ಷಡಕ್ಷರಿ, ಕಿಶೋರ್ ಕುಮಾರ್ ಕೊಡ್ಗಿ, ಎಚ್.ಎಸ್.ಮಂಜಪ್ಪ, ಆರ್.ಎಂ.ಮಂಜುನಾಥ ಗೌಡ, ಬಿ.ಆರ್.ಜಯಂತ್, ಹರನಾಥ ರಾವ್, ವ.ಶಂ.ರಾಮಚಂದ್ರ ಭಟ್, ಮಧುಕರ ಹೆಗಡೆ, ಕೆ.ಬಸವರಾಜ್, ಎಂ.ವಿ.ಮೋಹನ್, ಜಿ.ವಾಸುದೇವ, ಬಿ.ಮಂಜುನಾಥ, ರವಿಕುಮಾರ್, ಮಹೇಶ್ವರಪ್ಪ ಎ.ಒ.ರಾಮಚಂದ್ರ, ಸಂಸ್ಥೆಯ ಅಧ್ಯಕ್ಷ ಕೆ.ಎಂ.ಸೂರ್ಯನಾರಾಯಣ ಲಂಬೋದರ, ಮಂಜಪ್ಪ, ಡಾ. ವಸುಮತಿ ಗೌಡ ಇತರರಿದ್ದರು. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರನ್ನು, ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net