ಹುಬ್ಬಳ್ಳಿಯಲ್ಲಿ ವಿಶೇಷ ಆಕ್ಯುಪ್ರೆಶರ್ ಶಿಬಿರ

PATANJALI NEW
Published on

ಹುಬ್ಬಳ್ಳಿ : ಇಲ್ಲಿನ ಗೋಕುಲ ರಸ್ತೆ ಮುಕುಂದ ನಗರದ ಪತಂಜಲಿ ವೆಲ್​ನೆಸ್​ನಲ್ಲಿ ವಿಶೇಷ ಐದು ದಿನಗಳ ಶಾರೀರಿಕ ನೋವು ನಿವಾರಕ ಆಕ್ಯುಪ್ರೆಶರ್ ಶಿಬಿರ ಗುರುವಾರದಿಂದ ಆರಂಭಗೊಂಡಿತು.

ಆಕ್ಯುಪ್ರೆಶರ್ ತಜ್ಞ ಆರ್.ಕೆ. ಶರ್ಮಾ ಅವರಿಂದ ಸೆ. 25ರವರೆಗೆ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಈ ಶಿಬಿರ ನಡೆಯಲಿದೆ.

ಶಿಬಿರ ಉದ್ಘಾಟಿಸಿ ಮಾತನಾಡಿದ ಪತಂಜಲಿ ಕರ್ನಾಟಕ ರಾಜ್ಯ ಪ್ರಭಾರಿ ಯೋಗ ಗುರು ಭವರಲಾಲ್ ಆರ್ಯ, ಆಕ್ಯುಪ್ರೆಶರ್ ಚಿಕಿತ್ಸೆಯು ಪುರಾತನ ಭಾರತೀಯ ಔಷಧ ರಹಿತ ಚಿಕಿತ್ಸಾ ಪದ್ಧತಿಯಾಗಿದೆ. ಸಾವಿರಾರು ವರ್ಷಗಳ ಹಿಂದೆ ವಿದೇಶಿಯರು ಈ ಪದ್ಧತಿಯನ್ನು ಭಾರತದಲ್ಲಿ ಕಲಿತು ವಿದೇಶಗಳಲ್ಲಿ ಬಳಕೆಗೆ ತಂದರು. ಇಂದು ಈ ಪದ್ಧತಿ ವಿಶ್ವವ್ಯಾಪಿಯಾಗಿದ್ದು, ಹಲವಾರು ಗುಣಪಡಿಸಲಾಗದ ಖಾಯಿಲೆಗಳನ್ನು ಇದರಿಂದ ಗುಣಪಡಿಸಲಾಗುವುದು ಎಂದು ಹೇಳಿದರು.

ಆಕ್ಯುಪ್ರೆಶರ್ ತಜ್ಞ ಆರ್.ಕೆ. ಶರ್ಮಾ ಮಾತನಾಡಿ, ಈ ಆಕ್ಯುಪ್ರೆಶರ್ ಶಿಬಿರದಲ್ಲಿ ಮೊಣಕಾಲು ನೋವು, ಬೆನ್ನು ನೋವು, ಕುತ್ತಿಗೆ ನೋವು, ಕೀಲು ನೋವು, ಸಿಯಾಟಿಕ್ ನೋವು, ಸಂದಿ ನೋವು, ತಲೆನೋವು ಮತ್ತಿತರ ರೋಗಗಳಿಗೆ ಯಾವುದೇ ಔಷಧವಿಲ್ಲದೆ ಚಿಕಿತ್ಸೆ ನೀಡಲಾಗುವುದು ಮತ್ತು ಈ ನೋವುಗಳನ್ನು ಗುಣಪಡಿಸಲಾಗುವುದು ಎಂದು ತಿಳಿಸಿದರು.

ಪತಂಜಲಿ ಯೋಗ ಪೀಠ ಕರ್ನಾಟಕದ ವರಿಷ್ಠ ರಾಜ್ಯಪ್ರಭಾರಿ ಯೋಗ ಗುರು ಭವರಲಾಲ್ ಆರ್ಯ ಅವರಿಂದ ಪ್ರತಿದಿನ ಯೋಗ ಮಾರ್ಗದರ್ಶನ ಮತ್ತು ಪತಂಜಲಿ ವೆಲ್ನೆಸ್, ಹುಬ್ಬಳ್ಳಿಯ ಹಿರಿಯ ವೈದ್ಯರಿಂದ ಆಯುರ್ವೆದ, ಪ್ರಾಕೃತಿಕ ಚಿಕಿತ್ಸೆಯ ಮಾರ್ಗದರ್ಶನ ನೀಡಲಾಗುವುದು.

ಪತಂಜಲಿ ವೆಲ್​ನೆಸ್​ನ ಮಧುಸೂಧನ್, ಆಕ್ಯುಪ್ರೆಶರ್ ತಜ್ಞ ಪ್ರಕಾಶ, ಪತಂಜಲಿ ಯೋಗ ಸಮಿತಿ ಬೆಳಗಾವಿಯ ಮೋಹನ ಬಾಗೇವಾಡಿ , ಹುಬ್ಬಳ್ಳಿ- ಧಾರವಾಡದ ವಾಮನ ಶಾನಭಾಗ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net