

ಬೆಂಗಳೂರು: ಕಿರುತೆರೆ ನಟಿಯೋರ್ವರು (actress Veena) ಮದುವೆ ಪ್ರಸ್ತಾಪ ನಿರಾಕರಿಸಿದ್ದಕ್ಕೆ ಯುವಕನೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.
ಮದನ್ (25 ) ಮೃತ ಯುವಕ. ಈತ ಕಿರುತೆರೆ ನಟಿ ವೀಣಾ ಎನ್ನುವವರನ್ನು ಪ್ರೀತಿಸುತ್ತಿದ್ದ. ವೀಣಾ ಕಿರುತೆರೆ ಧಾರವಾಹಿಗಳಲ್ಲಷ್ಟೇ ಅಲ್ಲದೇ, ಅನೇಕ ಜಾಹೀರಾತುಗಳಲ್ಲೂ ನಟಿಸಿದ್ದರು. ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮದನ್, ವೀಣಾ ನಟಿಸುತ್ತಿದ್ದ ಧಾರಾವಾಹಿಗೆ ಹಾಕಿದ್ದ ಸೆಟ್‌ನಲ್ಲೂ ಕೆಲಸ ಮಾಡುತ್ತಿದ್ದರಂತೆ.
ಹೀಗಾಗಿ ಕಳೆದ ಕೆಲ ತಿಂಗಳುಗಳಿಂದ ಪರಿಚಯವಾಗಿ ಇಬ್ಬರ ನಡುವೆಯೂ ಪರಸ್ಪರ ಪ್ರೇಮಾಂಕುರವಾಗಿದೆ. ತದನಂತರದಿಂದ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರೆನ್ನಲಾಗಿದೆ. ನಿನ್ನೆ ಕೂಡ ಇಬ್ಬರೂ ಒಟ್ಟಿಗೆ ಪಾರ್ಟಿ ಕೂಡ ಮಾಡಿದ್ದು, ಇದೇ ವೇಳೆ ಮದನ್ ವೀಣಾಗೆ ಮದುವೆ ಪ್ರಸ್ತಾಪಿಸಿದ್ದಾನೆ. ಆದರೆ ವೀಣಾ, ಮದನ್ ಮದುವೆ ಪ್ರಸ್ತಾಪವನ್ನ ತಿರಸ್ಕರಿಸಿದ್ದರಿಂದ ಮನನೊಂದಿದ್ದಾನೆ.
ತಡರಾತ್ರಿ ಮದನ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದು, ಸದ್ಯ ವೀಣಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.