Uttara Kannada| ಯಕ್ಷಗಾನದಲ್ಲಿ ಮೊದಲ ಬಾರಿ ಮಂಥರೆಯಾಗಿ ಮಿಂಚಿದ ನಟಿ Umashree

Umashree
Published on

ಉತ್ತರ ಕನ್ನಡ: ತಮ್ಮ ನಟನೆ ಹಾಗೂ ವಿಭಿನ್ನ ಮ್ಯಾನರಿಸಂ ಮೂಲಕ ಛಾಪು ಮೂಡಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟಿ ಉಮಾಶ್ರೀ (Umashree) ಈಗಲೂ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಹಿರಿತೆರೆ ಹಾಗೂ ಕಿರುತೆರೆಯಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ನಟಿ ಉಮಾಶ್ರೀ ಅವರು ಮೊದಲ ಬಾರಿಗೆ ಯಕ್ಷಗಾನದಲ್ಲಿ ಕೂಡ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ.

ಖ್ಯಾತ ಯಕ್ಷಗಾನ ಕಲಾವಿದ ರಾಮಚಂದ್ರ ಚಿಟ್ಟಾಣಿಯವರ ಆಸೆ ಈಡೇರಿಸುವ ಸಲುವಾಗಿ ಅವರು ನಟಿಸಿದ್ದು, ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನದಲ್ಲಿ ಮಂಥರೆ ಪಾತ್ರದಲ್ಲಿ ನಟಿಸಿದ್ದಾರೆ. ಹೊನ್ನಾವರದ ಸೇಂಟ್‌ ಅಂಥೋನಿ ಮೈದಾನದಲ್ಲಿ ಪೆರ್ಡೂರು ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಆಯೋಜಿಸಿರುವ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ನಡೆಯಿತು.

ಯಕ್ಷಗಾನ ರಂಗದಲ್ಲಿ ಹಾಸ್ಯಗಾರರು ನಿರ್ವಹಿಸುವ ಸವಾಲಿನ ಪಾತ್ರಗಳಲ್ಲಿ ಒಂದು ಎಂದೇ ಪರಿಗಣಿಸಲ್ಪಟ್ಟ ಮಂಥರೆಯ ವೇಷದೊಂದಿಗೆ ಮೊದಲ ಬಾರಿಗೆ ಯಕ್ಷರಂಗಭೂಮಿಯಲ್ಲಿ ಉಮಾಶ್ರೀಯವರು ಪಾತ್ರ ನಿರ್ವಹಿಸಿದರು. ಪೆರ್ಡೂರು ಮೇಳದ ಪ್ರಧಾನ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ಪದ್ಯಕ್ಕೆ ಹೆಜ್ಜೆ ಹಾಕುತ್ತಾ ತನ್ನ ಅಭಿನಯದ ಚಾಕಚಕ್ಯತೆಯನ್ನು ತೋರುತ್ತಾ ರಂಗಸ್ಥಳವೇರಿದ ನಟಿಗೆ ಕೂತೂಹಲಿಗರಾಗಿ ಕಾಯುತ್ತಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಕೈಕೇಯಿ ಪಾತ್ರದಲ್ಲಿ ಖ್ಯಾತ ಸ್ತ್ರೀ ಪಾತ್ರಧಾರಿ ಯಲಗುಪ್ಪ ಸುಬ್ರಮಣ್ಯ ಹೆಗಡೆ ಉಮಾಶ್ರೀಯವರೊಂದಿಗೆ ಸಂಭಾಷಣೆಯಲ್ಲಿ ಗಮನ ಸೆಳೆದರು.

ಈ ಬಗ್ಗೆ ಮಾತನಾಡಿರುವ ನಟಿ ಉಮಾಶ್ರೀ (Umashree), ಸುಬ್ರಮಣ್ಯ ಚಿಟ್ಟಾಣಿಯವರು ಬಂದು ಯಕ್ಷಗಾನ ಮಾಡಲು ಕೋರಿದರು. ನಾನು ಇದನ್ನು ಎಂದಿಗೂ ಮಾಡಿಲ್ಲ. ಕಷ್ಟ ಆಗುತ್ತದೆ, ಮಾಡುವುದಿಲ್ಲ ಎಂದೆ. ರಾಮಚಂದ್ರ ಚಿಟ್ಟಾಣಿಯವರು ನನ್ನ ಬಳಿ ಮಂತರೆಯ ಪಾತ್ರ ಮಾಡಿಸಬೇಕು ಎಂದು ಹೇಳಿದ್ದರಂತೆ. ಈ ಮಾತನ್ನು ಸುಬ್ರಮಣ್ಯ ಚಿಟ್ಟಾಣಿಯವರು ನನಗೆ ಹೇಳಿದರು. ಅವರ ಆತ್ಮಕ್ಕೆ ತೃಪ್ತಿ ಸಿಗಲಿ ಎಂದು ನಟಿ ಉಮಾಶ್ರೀ ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net