

ಬೆಂಗಳೂರು: ಸ್ಯಾಂಡಲ್ವುಡ್ ನಟಿ ಶ್ವೇತಾ ಶ್ರೀವಾತ್ಸವ್ ಇದೀಗ ಸಾಕ್ಷಾತ್ ದುರ್ಗೆ ಆಗಿದ್ದಾರೆ. ಮಾತ್ರವಲ್ಲ, ಅಷ್ಟಭುಜೆ ಆಗಿ ಕಂಗೊಳಿಸಿದ್ದಾರೆ. ಅಷ್ಟಕ್ಕೂ ಇಷ್ಟೆಲ್ಲ ಬದಲಾವಣೆಯೊಂದಿಗೆ ಅವರು ಕಾಣಿಸಿಕೊಳ್ಳಲು ದಸರಾ ಕಾರಣ. ಈ ಮೂಲಕ ನವರಾತ್ರಿಯ ನೆಪದಲ್ಲಿ ಅವರು ಸಂದೇಶವೊಂದನ್ನು ಸಾರಿದ್ದಾರೆ.
ತಾವು ಗರ್ಭಿಣಿ ಆಗಿದ್ದಾಗಿನಿಂದಲೂ ಏನಾದರೂ ಒಂದು ಪ್ರಯೋಗದ ಮೂಲಕ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತ ಬಂದಿರುವ ಶ್ವೇತಾ, ಬಳಿಕ ಪುತ್ರಿಯೊಂದಿಗೆ ಸದಾ ಕ್ರಿಯಾಶೀಲವಾಗಿ ಏನಾದರೊಂದು ಚಟುವಟಿಕೆಯೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಲೇ ಬಂದಿದ್ದಾರೆ.
ಹಾಗೇ ಇದೀಗ ಈ ಗೆಟಪ್ನಲ್ಲೂ ಪುತ್ರಿಯನ್ನು ಎತ್ತಿಕೊಂಡಿರುವ ಅವರು ಅಷ್ಟಭುಜೆ ಆಗಿ ಒಂದೊಂದು ವಸ್ತುವನ್ನು ಹಿಡಿದುಕೊಂಡು 'ಶಕ್ತಿ ಪ್ರದರ್ಶನ' ಮಾಡಿದ್ದಾರೆ. 'ನಾನು ಒಬ್ಬ ಸಾಮಾನ್ಯ ಮಹಿಳೆ, ಆದರೆ ನನ್ನೊಳಗಿನ ಶಕ್ತಿಯನ್ನು ಇನಷ್ಟು ಬಲಪಡಿಸಿಕೊಳ್ಳಲು ನಾನು ಅವಲಂಬಿಸುವ ಮುಖ್ಯವಾದ ಅಸ್ತ್ರಗಳು ಇವು. ತಾಯಿ ದುರ್ಗೆಯ ಕಥೆಯೇ ನಮಗೆಲ್ಲಾ ಸ್ಫೂರ್ತಿ' ಎನ್ನುವ ಅವರು ಈಗಿನ ಮಹಿಳೆಗೆ ಎಂಥ ಅಸ್ತ್ರಗಳು ಅಗತ್ಯ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.
ತಮ್ಮ ಒಳಗಿನ ಹಾಗೂ ಹೊರಗಿನ ಅಂಧಕಾರ ನೀಗಿಸಲು ಇವೇ ನನ್ನ ಶಕ್ತಿ ಎಂದಿರುವ ಅವರು, ಒಂದು ಕೈಯಲ್ಲಿ ತಮ್ಮ ಪುತ್ರಿಯನ್ನು ಎತ್ತಿಕೊಂಡಿದ್ದರೆ, ಉಳಿದ ಏಳು ಕೈಯಲ್ಲಿ ಒಂದರಲ್ಲಿ ಭಗವದ್ಗೀತೆ, ಇನ್ನೊಂದರಲ್ಲಿ ಲ್ಯಾಪ್ಟಾಪ್, ಮತ್ತೊಂದರಲ್ಲಿ ಯೋಗ ಮ್ಯಾಟ್.. ಹೀಗೆ ಒಂದೊಂದು ವಸ್ತುವನ್ನು ಹಿಡಿದುಕೊಂಡು ಇತರ ಮಹಿಳೆಯರಿಗೆ ಪರೋಕ್ಷವಾಗಿ ಕಿವಿಮಾತು ಹೇಳಿದ್ದಾರೆ.