

ಮೈಸೂರು: ಕದಂಬ ರಂಗ ವೇದಿಕೆ, ರೋಟರಿ ಮೈಸೂರು(ಉತ್ತರ) ಸಹಯೋಗದಲ್ಲಿ ನೀಡುವ 2024ನೇ ಸಾಲಿನ ರೋಟರಿ ಕದಂಬ ರಂಗ ಪ್ರಶಸ್ತಿಗೆ ನಟಿ ಶೈಲಜಾ ಮತ್ತು ನಾಟಕಕಾರ ಉದಯ್‌ಕುಮಾರ್ ಗೆಜ್ಜೆಹೆಜ್ಜೆ ಭಾಜನರಾಗಿದ್ದಾರೆ.
ಮಾ.15ರಂದು ಸಂಜೆ 6.30ಕ್ಕೆ ಕಲಾಮಂದಿರದ ಆವರಣದ ಕಿರುರಂಗಮಂದಿರದಲ್ಲಿ ಇವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಹಿರಿಯ ಕಲಾವಿದೆ ಗಿರಿಜಾ ಲೋಕೇಶ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ರೋಟರಿ ವಲಯದ 8ರ ಸಹಾಯಕ ಗವರ್ನರ್ ಎಂ.ಕೆ. ನಂಜಯ್ಯ, ರೋಟರಿ ಮೈಸೂರು(ಉತ್ತರ) ಸಂಸ್ಥೆಯ ಅಧ್ಯಕ್ಷ ಎಂ.ಕೆ.ಶ್ರೀಧರ್ ಪಾಲ್ಗೊಳ್ಳಲಿದ್ದಾರೆ ಎಂದು ರಂಗ ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೆಂಗಳೂರಿನ ಯುವ ಪಡೆ ಪಯಣ ತಂಡದಿಂದ ಅರುಣ್ ಸೂರ್ಯ ಅವರ ನಿರ್ದೇಶನ ‘ನಮ್ಗೇನ್ ಬೆಲೆನೇ ಇಲ್ವಾ’ ಹಾಸ್ಯಮಯ ನಾಟಕ ಪ್ರದರ್ಶನವಾಗಲಿದೆ ಎಂದು ತಿಳಿಸಿದರು. ಸಂಘಟನೆಯ ಎಂ.ಕೆ.ನಂಜಯ್ಯ, ರಾಜು, ಸುಬ್ಬನರಸಿಂಹ, ಡಿ.ತಿಪ್ಪಣ್ಣ ಇದ್ದರು.