

ಬೆಂಗಳೂರು: ಸಂಯುಕ್ತಾ ಹೊರನಾಡು ನಟನೆ ಮಾತ್ರವಲ್ಲ, ಸಾಮಾಜಿಕ ಕಳಕಳಿ ಹಾಗೂ ಸಾಕುಪ್ರಾಣಿಗಳ ಮೇಲೆ ಪ್ರೀತಿಯಿಂದಲೂ ಜನಪ್ರಿಯರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು ಪ್ರಾಣ ಅನಿಮಲ್ ಫೌಂಡೇಷನ್ ಮೂಲಕ ಪ್ರಾಣಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪ್ರಾಣಿಗಳಿಗೆ ಆಂಬುಲೆನ್ಸ್ ಸೇವೆ ಪ್ರಾರಂಭಿಸಿದ್ದು, ಸಹಾಯವಾಣಿ ಕೂಡ ತೆರೆದಿದ್ದಾರೆ. ಇತ್ತೀಚೆಗಷ್ಟೆ ಬನಶಂಕರಿಯ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಪ್ರಾಣಿಗಳ ಆಂಬುಲೆನ್ಸ್ ಮತ್ತು ಸಹಾಯವಾಣಿ ಸೇವೆಗೆ ನಟ ಪ್ರಕಾಶ್ ರೈ ಚಾಲನೆ ನೀಡಿದರು. ಪ್ರಕಾಶ್ ಬೆಳವಾಡಿ, ಸುಧಾ ನಾರಾಯಣ್, ಅನಿರುದ್ಧ, ಸುಧಾ ಬೆಳವಾಡಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
‘ಪ್ರಾಣಿಗಳ ಜತೆ ನಾವು ಹೆಚ್ಚು ಪ್ರೀತಿಯಿಂದ ಮಾತನಾಡಿದರೆ, ಕೆಲವರು ಹುಚ್ಚರು ಎಂದುಕೊಳ್ಳಬಹುದು. ಆದರೆ, ನನಗೆ ಮೊದಲಿನಿಂದಲೂ ಪ್ರಾಣಿಪ್ರೀತಿ ಹೆಚ್ಚು. ಇಂದಿನ ಪೀಳಿಗೆಯ ಯುವಕ-ಯುವತಿಯರಲ್ಲೂ ಪ್ರಾಣಿಗಳ ಮೇಲಿನ ಪ್ರೀತಿ ಹೆಚ್ಚುತ್ತಿರುವುದು ಖುಷಿಯ ವಿಚಾರ’ ಎಂದು ಸಂತಸ ವ್ಯಕ್ತಪಡಿಸಿದರು ಪ್ರಕಾಶ್ ರೈ. ‘ಪ್ರಾಣಿಗಳು ತುಂಬಾ ಪ್ರೀತಿ ಕೊಡುತ್ತವೆ. ಅವುಗಳ ನೋವನ್ನು ಕಡಿಮೆ ಮಾಡುವುದೇ ಪ್ರಾಣ ಅನಿಮಲ್ ಫೌಂಡೇಷನ್ ಉದ್ದೇಶ. ಸದ್ಯಕ್ಕೆ ಬೆಂಗಳೂರಿನಲ್ಲಿ ಪ್ರಾಣ ಆಂಬುಲೆನ್ಸ್ 24/7 ಹಾಗೂ ಸಹಾಯವಾಣಿ ಕೆಲಸ ಮಾಡುತ್ತದೆ. ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸುವ ಉದ್ದೇಶವಿದೆ’ ಎಂದರು ನಟಿ ಸಂಯುಕ್ತಾ ಹೊರನಾಡು.