ನಟಿ ದೀಪಿಕಾದಾಸ್ ತಾಯಿಗೆ ಬೆದರಿಕೆ

Published on

ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು

ನೆಲಮಂಗಲ : ಕಿರುತೆರೆ ನಟಿ ದೀಪಿಕಾ ದಾಸ್ ಅವರ ತಾಯಿಗೆ ಯುವಕನೊಬ್ಬ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೀಪಿಕಾದಾಸ್ ಅವರ ತಾಯಿ ಪದ್ಮಲತಾ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಗಳು ದೀಪಿಕಾದಾಸ್ ಹಾಗೂ ಅಳಿಯ ದೀಪಕ್‌ಕುಮಾರ್ ಬಗ್ಗೆ ಅಪಪ್ರಚಾರ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಪ್ರಕರಣ?: ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಿದರುಕಲ್ಲು ಬಳಿಯ ಖಾಸಗಿ ಅರ್ಪಾಟ್‌ಮೆಂಟ್‌ನಲ್ಲಿ ಪದ್ಮಲತಾ ವಾಸವಾಗಿದ್ದು, ಒಂದು ತಿಂಗಳಿಂದ ದೀಪಿಕಾದಾಸ್ ಹಾಗೂ ದೀಪಕ್‌ಕುಮಾರ್ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಯಶವಂತ್ ಎಂಬಾತ 7 ತಿಂಗಳಿಂದ ಕರೆ ಮಾಡಿ ನಿಮ್ಮ ಮಗಳನ್ನು ದೀಪಕ್ ಜತೆ ಯಾಕೆ ಮದುವೆ ಮಾಡಿದ್ರಿ, ಅವನು ಸರಿಯಿಲ್ಲ. ಸಾಕಷ್ಟು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. ಜತೆಗೆ ಬಡಾವಣೆ ನಿರ್ಮಾಣ ಮಾಡಿ ಸಾಕಷ್ಟು ಜನರಿಗೆ ಮೋಸ ಮಾಡಿ ಜೈಲಿಗೆ ಹೋಗಿ ಬಂದಿದ್ದಾನೆಂದು ತಿಳಿಸಿದ್ದ. ಇದಕ್ಕೆ ಪದ್ಮಲತಾ, ಅಳಿಯ ಆ ರೀತಿ ಮಾಡಿದ್ದಲ್ಲಿ ಕಾನೂನಾತ್ಮಕವಾಗಿ ದೂರು ನೀಡಿ ಪೊಲೀಸರು ನೋಡಿಕೊಳ್ಳುತ್ತಾರೆಂದು ತಿಳಿಸಿ ಸುಮ್ಮನಾಗಿದ್ದಾರೆ.

ದೀಪಿಕಾದಾಸ್‌ಗೂ ಬೆದರಿಕೆ: ಆರೋಪಿ ಯಶವಂತ್, ದೀಪಿಕಾದಾಸ್‌ಗೂ ಕರೆ ಮಾಡಿ ಇದೇ ವಿಚಾರ ತಿಳಿಸಿ ಮಾಧ್ಯಮಗಳಿಗೆ ಈ ಸುದ್ದಿ ನೀಡಿ ನಿಮ್ಮ ಹೆಸರಿಗೆ ಧಕ್ಕೆ ತರುವುದಾಗಿ ತಿಳಿಸಿದ್ದಾನೆ. ನೀವು ನನಗೆ ಹಣ ನೀಡಬೇಕು. ಇಲ್ಲವಾದಲ್ಲಿ ಸಾಲಗಾರರ ಕಾಟಕ್ಕೆ ನಿಮ್ಮ ಹೆಸರು ಬರೆದು ಸಾಯುತ್ತೇನೆಂದು ಬೆದರಿಸಿದ್ದ ಎನ್ನಲಾಗಿದೆ. ಬಳಿಕ ದೀಪಿಕಾದಾಸ್ ತಾಯಿಗೆ ನಿತ್ಯ ಕರೆ ಮಾಡಿ ಕಿರುಕುಳ ನೀಡಿದ್ದ. ದೀಪಕ್ ಕುಮಾರ್ ಅವರ ಕೆಲವು ಗೆಳೆಯರಿಗೂ ಯಶವಂತ್ ಕರೆ ಮಾಡಿ ಇದೇ ವಿಚಾರ ಹೇಳಿದ್ದಾನೆ. ಕಳೆದ ಏಳು ತಿಂಗಳಿಂದಲೂ ದೀಪಿಕಾ ದಾಸ್, ಪದ್ಮಲತಾ ಹಾಗೂ ದೀಪಕ್ ಕುಮಾರ್‌ಗೆ ಸಂಬಂಧಿಸಿದ ಇನ್ನಿತರರಿಗೆ ಆರೋಪಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ನ್ಯಾಯಲಯದ ಮೊರೆ: ಇದೇ ವಿಚಾರವಾಗಿ ಜೂನ್ 14ರಂದು ದೀಪಕ್‌ಕುಮಾರ್ ನ್ಯಾಯಾಲಯದ ಮೊರೆ ಹೋಗಿದ್ದು, ಆದರೆ ಆರೋಪಿ ಯಶವಂತ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net