

- ಅಜ್ಜಿಯ ಜತೆ ಒಡನಾಟ ಚೆನ್ನಾಗಿತ್ತು
- ಕೆಲ ದಿನಗಳ ಹಿಂದೆ ಮನೆಗೆ ಬಂದಾಗ ಅಜ್ಜಿಯನ್ನ ನೋಡಿದ್ದೆ
ಬೆಂಗಳೂರು: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ವುಡ್ನ ಹಿರಿಯ ಕಲಾವಿದೆ 85 ವರ್ಷದ ಲೀಲಾವತಿ ಅವರು 2 ದಿನಗಳ ಹಿಂದೆ ನಿಧನರಾಗಿದ್ದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಅಂತ್ಯಕ್ರಿಯೆ ನೆರವೇರಿದೆ. ಸಾಕಷ್ಟು ಅಭಿಮಾನಿಗಳು ಹಾಗೂ ಕುಟುಂಬಸ್ಥರನ್ನು ಅಗಲಿ ಬಾರದ ಲೋಕಕ್ಕೆ ನಟಿ ಲೀಲಾವತಿ ಅವರು ಹೋಗಿದ್ದಾರೆ.
ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಚೆನ್ನೈನಿಂದ ಲೀಲಾವತಿ ಅವರ ಸೊಸೆ, ಅಂದರೆ ವಿನೋದ್ ರಾಜ್ ಅವರ ಪತ್ನಿ ಅನು ಮತ್ತು ಲೀಲಾವತಿ ಮೊಮ್ಮಗ ಯುವರಾಜ್ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಲೀಲಾವತಿ ಮೊಮ್ಮಗ ಯುವರಾಜ್ ಅಜ್ಜಿಯ ಕುರಿತಾಗಿ ಮಾತನಾಡುತ್ತಾ ಭಾವುಕರಾಗಿದ್ದಾರೆ.
ಅಜ್ಜಿಯ ಜತೆ ಒಡನಾಟ ಚೆನ್ನಾಗಿತ್ತು. ನಮ್ಮ ಅಜ್ಜಿ ಆತ್ಮಕ್ಕೆ ಶಾಂತಿ ಸಿಗಲಿ. ಕೊನೆಯದಾಗಿ ಕೆಲ ದಿನಗಳ ಹಿಂದೆ ಮನೆಗೆ ಬಂದಾಗ ಅಜ್ಜಿಯನ್ನ ನೋಡಿದ್ದೆ. ನಾನು ದೂರ ಹೋಗುವವರೆಗೆ ನನ್ನನ್ನ ನೋಡಿದ್ದರು ಎಂದು ಕಡೆಯ ಭೇಟಿಯ ಬಗ್ಗೆ ಮೊಮ್ಮಗ ಯುವರಾಜ್ ಸ್ಮರಿಸಿದ್ದಾರೆ.
ವಿನೋದ್ ರಾಜ್ ಮದುವೆ ವಿಚಾರವಾಗಿ ಹಲವಾರು ಗೊಂದಲಗಳು ಇದ್ದವು. ತಾಯಿಗಾಗಿ ವಿನೋದ್ ಮದುವೆ ಆಗದೇ, ತಾಯಿಯ ಸೇವೆಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇತ್ತೀಚೆಗಷ್ಟೇ ವಿನೋದ್ ರಾಜ್ ಮದುವೆ ಆಗಿರುವ ಸುದ್ದಿಯನ್ನು ನಿರ್ದೇಶಕರೊಬ್ಬರು ಫೋಟೋ ಸಮೇತ ವಿವರಿಸಿದ್ದರು. ವಿನೋದ್ ರಾಜ್ ಮದುವೆ ವಿಚಾರವನ್ನು ಸ್ವತಃ ಲೀಲಾವತಿ ಮತ್ತು ವಿನೋದ್ ರಾಜ್ ಕೂಡ ಒಪ್ಪಿಕೊಂಡಿದ್ದರು.