ರೈತ ಕುಟುಂಬಕ್ಕೆ ನಟ ವಿನೋದ್‌ರಾಜ್ ನೆರವು: ಸಿಂಧಘಟ್ಟದಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಕುರಿತು ವರದಿ ಮಾಡಿದ್ದ ವಿಜಯವಾಣಿ…!

Actor Vinod Raj helps the farmer family mandya
Published on

ಕೆ.ಆರ್.ಪೇಟೆ: ತೀವ್ರ ಬರಗಾಲದ ಪರಿಣಾಮ ರಾಸುಗಳಿಗೆ ಮೇವಿಲ್ಲದೆ ಪರದಾಡುತ್ತಿದ್ದ ರೈತ ಕುಟುಂಬಕ್ಕೆ ಹಿರಿಯ ನಟ ವಿನೋದ್‌ರಾಜ್ ನೆರವಾಗಿದ್ದಾರೆ. ಒಂದು ಲಾರಿ ಮೇವನ್ನು ಉಚಿತವಾಗಿ ನೀಡಿ ರಾಸುಗಳ ಸಂರಕ್ಷಣೆಗೆ ಮುಂದಾಗಿದ್ದಾರೆ.
ಸಿಂಧಘಟ್ಟ ಗ್ರಾಮದ ರೈತ ಪುಟ್ಟರಾಜು ತಮ್ಮ ರಾಸುಗಳಿಗೆ ಮೇವಿಲ್ಲದೆ ಪರದಾಡುತ್ತಿದ್ದರು. ಇದನ್ನು ತಿಳಿದು ಒಂದು ಲಾರಿ ಲೋಡ್ ಹುಲ್ಲಿನೊಂದಿಗೆ ಸಿಂಧಘಟ್ಟ ಗ್ರಾಮಕ್ಕೆ ಗುರುವಾರ ಆಗಮಿಸಿ ರೈತರಿಗೆ ವಿತರಿಸಿದ್ದಾರೆ.
ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದ ಲ್ಲಿ ಮಳೆಯಾಗದೆ ಕೆರೆ-ಕಟ್ಟೆಗಳು ಬರಿದಾಗಿವೆ. ಹೇಮಾವತಿ ನದಿಯಿಂದಲೂ ತಾಲೂಕಿನ ಕೆರೆ ಕಟ್ಟೆಗಳು ಭರ್ತಿಯಾಗಿಲ್ಲ. ಪರಿಣಾಮ ಜನ ಜಾನುವಾರು ಮತ್ತು ಪ್ರಾಣಿ, ಪಕ್ಷಿಗಳಿಗೂ ಕುಡಿಯುವ ನೀರಿನ ಅಭಾವ ಕಾಡುತ್ತಿದೆ. ಬೆಳೆಯಿಲ್ಲದೆ ರಾಸುಗಳಿಗೆ ಮೇವಿನ ಕೊರತೆ ಎದುರಾಗಿದೆ. ಜಾನುವಾರಗಳ ರಕ್ಷಣೆಗೆ ಅಗತ್ಯ ಮೇವು ನೀಡುವಂತೆ ರೈತ ಪುಟ್ಟರಾಜು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಂಡಿದ್ದರು. ಇದನ್ನು ಗಮನಿಸಿದ ನಟ ವಿನೋದ್‌ರಾಜ್ ಒಂದು ಲಾರಿ ಹುಲ್ಲನ್ನು ಬೇರೆ ರೈತರಿಂದ ಖರೀದಿ ಮಾಡಿ ಬಡರೈತನಿಗೆ ಕೊಡುಗೆಯಾಗಿ ನೀಡಿದ್ದಾರೆ. ಜತೆಗೆ ಪುಟ್ಟರಾಜು ಅವರ ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ರೈತ ಪುಟ್ಟರಾಜು ಅವರ ಮಗ ಪಾಪಣ್ಣ ವಿಜಯವಾಣಿ ಸಹಾಯವಾಣಿಗೆ ಕರೆ ಮಾಡಿ ಜಾನುವಾರುಗಳಿಗೆ ಮೇವಿಲ್ಲದಿರುವ ಬಗ್ಗೆ ತಿಳಿಸಿ ಸಹಾಯ ಕೋರಿದ್ದರು. ಪತ್ರಿಕೆಯಲ್ಲಿ ಸಿಂಧಘಟ್ಟ ಗ್ರಾಮದಲ್ಲಿ ಜಾನುವಾರುಗಳಿಗೆ ಮೇವಿಲ್ಲದಿರುವ ಬಗ್ಗೆ ವಿಶೇಷ ಸುದ್ದಿ ಪ್ರಕಟವಾಗಿತ್ತು.
ನಟ ವಿನೋದ್‌ರಾಜ್ ಕುಟುಂಬದ ಸದಸ್ಯರ ಅಭಿಲಾಷೆಯ ಮೇರೆಗೆ ನಗುತೈತೆ ದೈವ ಅಲ್ಲಿ ಕುಳಿತೈತೆ ಜೀವ ಇಲ್ಲಿ ವಿಧಿಯಾಟ ಕಂಡೋರ‌್ಯಾರು ಮಾನವ ಹಾಡನ್ನು ಹಾಡಿ ತಮ್ಮ ತಾಯಿ, ಹಿರಿಯ ನಟಿ ಲೀಲಾವತಿ ಅವರನ್ನು ನೆನೆದು ಭಾವುಕರಾಗಿ ಕಣ್ಣೀರು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net