ಕನ್ನಡ ಉಳಿಸಿ ಬೆಳೆಸಲು ಎಲ್ಲರೂ ಮುಂದಾಗಿ: ನಟ ವಿಕ್ರಂಸೂರಿ

29 Ramanagara photo 2
Published on

ರಾಮನಗರ:ಹೆಸರಾಂತ ಸಾಹಿತಿಗಳು ರಚಿಸಿರುವ ಕೃತಿಗಳನ್ನು ಮಕ್ಕಳು ಅಭ್ಯಾಸ ಮಾಡಿ,ನಾಡಿನ ಪರಂಪರೆ, ಸಂಸ್ಕೃತಿ ಬಗ್ಗೆ ಅರಿವು ಪಡೆಯಬೇಕು ಎಂದು ನಟ, ನೃತ್ಯ ಸಂಯೋಜಕ ವಿಕ್ರಂಸೂರಿ ತಿಳಿಸಿದರು.

ನಗರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್​ನ ಜಿಲ್ಲಾ ಸಮಿತಿ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ವಾಲ್ಮೀಕಿ ಜಯಂತಿ, ಕವಿಗೋಷ್ಠಿ ಹಾಗೂ ಗೀತಗಾಯನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕನ್ನಡವನ್ನು ಎದೆಯಾಳದಲ್ಲಿ ಇಟ್ಟುಕೊಂಡು ಉಳಿಸಿ ಬೆಳೆಸಲು ಮುಂದಾಗಬೇಕು. ಪಾಲಕರು ಕಡ್ಡಾಯವಾಗಿ ಕನ್ನಡ ಪತ್ರಿಕೆಗಳನ್ನು ಓದುವಂತೆ ಮಕ್ಕಳಲ್ಲಿ ವಿಶ್ವಾಸ ತುಂಬಬೇಕು. ಇದರಿಂದ ತಾಯ್ನುಡಿ ಸರಳವಾಗಿ ಮತ್ತು ಶೀಘ್ರವಾಗಿ ಕಲಿಯಲು ಸಹಾಯ ಆಗುತ್ತದೆ. ಹತ್ತನೇ ತರಗತಿವರೆಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಪರಂಪರೆಯನ್ನು ಸರ್ಕಾರ ಹುಟ್ಟು ಹಾಕಬೇಕು ಎಂದರು.

ಚನ್ನಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕಿ ವಿ.ರುಕ್ಮಿಣಿ ಮಾತನಾಡಿ, ಕನ್ನಡ ಹೃದಯದ ಭಾಷೆಯಾಗಬೇಕು. ಕನ್ನಡ ನಾಡು ನುಡಿಗೆ ಗೌರವ ಸಲ್ಲಿಸಬೇಕು. ಮನೆ ಮತ್ತು ಮನಸ್ಸು ಕನ್ನಡವಾಗಿರಬೇಕು. ತಂತ್ರಜ್ಞಾನ ಸಾಕಷ್ಟು ಬೆಳವಣಿಗೆಯಾಗಿದ್ದು ಆಡಳಿತದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಬಳಸಬೇಕು ಎಂದು ತಿಳಿಸಿದರು.

ಅಖಿಲ ಭಾರತ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ಅಧ್ಯಕ್ಷ ಚಂದ್ರಶೇಖರಯ್ಯ ಮಾತನಾಡಿ, ವಾಲ್ಮೀಕಿ ರಚಿಸಿದ ರಾಮಾಯಣ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಸಾಹಿತ್ಯ ಕೊಡುಗೆಯಾಗಿದೆ. ವಾಲ್ಮೀಕಿ ರಾಮಾಯಣ ದೇಶ ಭಾಷೆಗೆ ಸೀಮಿತಗೊಳ್ಳದೆ ಜಾಗತಿಕವಾಗಿ ಆರಾಧಿಸಲ್ಪಟ್ಟಿದೆ. ಜನಸಮುದಾಯದ ಸಮಸ್ಯೆಗಳು, ಸಂಕಟಗಳು, ಸವಾಲುಗಳಿಗೆ ವಾಲ್ಮೀಕಿ ರಾಮಾಯಣದಲ್ಲಿ ಉತ್ತರ ಸಿಗುತ್ತದೆ ಎಂದು ಹೇಳಿದರು. ಸಂಚಾಲಕ ಎಸ್. ರುದ್ರೇಶ್ವರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಎಂ.ಪವಿತ್ರಾ ಮತ್ತಿತರರಿದ್ದರು.

ಕವನ ವಾಚನ

ಕವಿಗಳಾದ ಡಾ.ಮಲ್ಲಿಕಾರ್ಜುನ ಛಬ್ಬಿ, ಎಸ್.ಸುಮಂಗಲಾ, ಎಚ್.ಕೆ.ಶೈಲಾ ಶ್ರೀನಿವಾಸ್, ಸಿ.ರಮೇಶ್ ಹೊಸದೊಡ್ಡಿ, ಕಾಕೋಳು ಶೈಲೇಶ್, ಬಿ.ಎಸ್.ರೂಪರೇವಣ್ಣ, ಜಿ.ಕೃಷ್ಣಾನಾಯಕ್, ಯೋಗೇಶ್ ಚಕ್ಕೆರೆ, ಕಿಶೋರ್​ಅರಸ್ ಕೂಡ್ಲೂರು, ಎಂ.ಎ.ತುಳಸೀಧರ, ಎಚ್.ಕೆ.ಸಂಧ್ಯಾಶ್ರೀ, ಸಚಿನ್ ನಾರಾಯಣಕೆಲಗೆರೆ, ಕಿರಣ್​ರಾಜು ಕವನ ವಾಚಿಸಿದರು.ನೂಪುರ ಸಂಗೀತ ಶಾಲೆಯ ವಿಜಯೇಂದ್ರ ಮತ್ತು ತಂಡ ಹಾಗೂ ಎಬಿಸಿಡಿ ನೃತ್ಯ ಶಾಲೆಯ ಎಸ್.ರೇಣುಕಾಪ್ರಸಾದ್ ಗೀತಗಾಯನ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net