ರಸ್ತೆಯಲ್ಲೇ ಸಂಚಾರಿಯ ಅಂತಿಮ ದರ್ಶನ ; ಪಾರ್ಥೀವ ಶರೀರ ನೋಡಲು ಗಂಟೆಗಟ್ಟಲೆ ಕಾದು ನಿಂತಿದ್ದ ಅಭಿಮಾನಿಗಳು

15 HULIYAR 1
Published on

ಹುಳಿಯಾರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್(38) ಪಾರ್ಥೀವ ಶರೀರ ಶಿರಾ, ಹುಳಿಯಾರು, ದೊಡ್ಡ ಎಣ್ಣೆಗೆರೆ ಮೂಲಕ ಪಂಚನಹಳ್ಳಿಗೆ ತಲುಪಿತು.

ತುಮಕೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ವಿಜಯ್ ಹುಟ್ಟೂರು ಪಂಚನಹಳ್ಳಿಗೆ ಪಾರ್ಥೀವ ಶರೀರ ಬರಲಿದೆ ಎಂಬ ಸುದ್ದಿ ತಿಳಿದ ಸಾವಿರಾರು ಅಭಿಮಾನಿಗಳು ದರ್ಶನಕ್ಕಾಗಿ ಹುಳಿಯಾರು ಬಿ.ಎಚ್.ರಸ್ತೆಯಲ್ಲಿ ಕಾದು ನಿಂತಿದ್ದರು. ಪಟ್ಟಣದ ರಾಮಗೋಪಾಲ್ ವೃತ್ತದಿಂದ ಹೊಸದುರ್ಗ ರಸ್ತೆಯವರೆಗೂ ರಸ್ತೆಯ ಪಕ್ಕದಲ್ಲಿ ಸಾವಿರಾರು ಜನರು ನೆರೆದಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಕಡೂರು ಮಾಜಿ ಶಾಸಕ ವೈ.ಎಸ್.ವಿ.ದತ್ತ ನೇತೃತ್ವದಲ್ಲಿ ಪಾರ್ಥೀವ ಶರೀರ ಹೊತ್ತ ಆಂಬುಲೆನ್ಸ್ ಬಂದ ಕೂಡಲೇ ವಿಜಯ್ ಅಂತಿಮ ದರ್ಶನ ಪಡೆಯಲು ಜನರು ಮುಗಿಬಿದ್ದರು. ಕರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಹೆಚ್ಚು ಜನರು ಸೇರಬಾರದು ಎಂಬ ಕಾರಣಕ್ಕೆ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ಆಂಬುಲೆನ್ಸ್‌ನಲ್ಲಿಯೇ ಇದ್ದ ನಟ ನೀನಾಸಂ ಸತೀಶ್, ಕರೊನಾ ಹಿನ್ನೆಲೆಯಲ್ಲಿ ಎಲ್ಲರೂ ಮುಗಿ ಬೀಳದಂತೆ ಹಾಗೂ ಇಡೀ ಪಟ್ಟಣದ ಪರವಾಗಿ ಯಾರಾದರೂ ಒಬ್ಬರು ಗೌರವ ಸಲ್ಲಿಸುವಂತೆ ಮಾಡಿಕೊಂಡ ಮನವಿಗೆ ಸ್ಪಂದಿಸಿದ ಜನರು ನಿಂತಲ್ಲಿಯೇ ಅಗಲಿದ ಕಲಾವಿದನಿಗೆ ಗೌರವ ಸಮರ್ಪಿಸಿದರು. ಮಹಿಳೆಯರು, ಮಕ್ಕಳು, ನಾಗರಿಕರು ನಿಂತಲ್ಲಿಯೇ ಕಣ್ಣೀರಿಟ್ಟರು. ಸಾಹಿತಿ ಎಸ್.ಗಂಗಾಧರಯ್ಯ, ಚಿತ್ರನಿರ್ದೇಶಕ ಬಿ.ಎಸ್.ಲಿಂಗದೇವರು, ನಟರಾದ ನೀನಾಸಂ ಸತೀಶ್, ಕೆ.ಆರ್.ಪೇಟೆ ಶಿವರಾಜು ಮತ್ತಿತರರು ಇದ್ದರು.

ವಿಜಯ್ ಚಿತ್ರಕ್ಕೆ ಪ್ರೋತ್ಸಾಹಿಸಿದ್ದ ಚಿ.ನಾ.ಹಳ್ಳಿ ಜನ: ಅಪ್ಪಟ ಪ್ರತಿಭಾವಂತ ಸಂಚಾರಿ ವಿಜಯ್ ಅವರಿಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿರುವ ‘ನಾನು ಅವನಲ್ಲ, ಅವಳು’ ಚಿತ್ರಕ್ಕೆ ಚಿಕ್ಕನಾಯಕನಹಳ್ಳಿ ತಾಲೂಕಿನ ಜನರು ದೊಡ್ಡ ಬೆಂಬಲ ನೀಡಿದ್ದರು. ಚಿತ್ರದ ನಿರ್ದೇಶಕ ಬಿ.ಎಸ್.ಲಿಂಗದೇವರು ತಾಲೂಕಿನ ಬ್ಯಾಲದಕೆರೆಯವರು ಹಾಗೂ ವಿಜಯ್ ಪಕ್ಕದ ಪಂಚನಹಳ್ಳಿಯ ಹುಡುಗ ಎಂಬ ಕಾರಣಕ್ಕೆ ಚಿತ್ರಮಂದಿರದಲ್ಲಿ ಹೆಚ್ಚು ದಿನ ಸಿನಿಮಾ ಇರುವಂತೆ ಟಿಕೆಟ್ ಕೊಂಡು ಹಂಚಿದ್ದರು. ಚಿಕ್ಕನಾಯಕನಹಳ್ಳಿಯ ನವೋದಯ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭಕ್ಕೂ ವಿಜಯ್ ಆಗಮಿಸಿ, ವಿದ್ಯಾರ್ಥಿಗಳಿಗೆ ರಂಗ ಕಲೆಯ ಬಗ್ಗೆ ಉಪನ್ಯಾಸ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net