ಹನುಮಾನ ದೇವಸ್ಥಾನಕ್ಕೆ ನಟ ಸುದೀಪ್ ಭೇಟಿ

27-04-Shiva-1
ರಾಯಚೂರಿನ ಗಾಂಧಿ ವೃತ್ತದಲ್ಲಿರುವ ಹನುಮಾನ ದೇವಸ್ಥಾನಕ್ಕೆ ನಟ ಸುದೀಪ ಪತ್ನಿ ಪ್ರಿಯಾ ಜತೆಗೆ ಶನಿವಾರ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
Published on

ರಾಯಚೂರು: ನಗರದ ಗಾಂಧಿ ವೃತ್ತದಲ್ಲಿರುವ ಹನುಮಾನ ದೇವಸ್ಥಾನಕ್ಕೆ ನಟ ಸುದೀಪ್ ಪತ್ನಿ ಪ್ರಿಯಾ ಜತೆಗೆ ಶನಿವಾರ ಆಗಮಿಸಿ ದೇವರಿಗೆ ವಿಶೇಷ ಪೂಜೆ ನಡೆಸಿ ಹೋಮದಲ್ಲಿ ಪಾಲ್ಗೊಂಡರು.
ಪುರಾತನವಾದ ದೇವಸ್ಥಾನವನ್ನು ಇತ್ತೀಚೆಗೆ ನವೀಕರಣಗೊಳಿಸಿ ದೇವರ ಪ್ರಾಣ ಪ್ರತಿಷ್ಠಾಪನೆಗೊಳಿಸಿ ಹನುಮ ಜಯಂತಿಯನ್ನು ಲೋಕಾರ್ಪಣೆ ಮಾಡಲಾಗಿತ್ತು. ಈ ಹಿಂದೆಯೂ ದೇವಸ್ಥಾನ ನವೀಕರಣ ಕಾಮಗಾರಿ ಸಂದರ್ಭದಲ್ಲಿಯೂ ಸುದೀಪ್ ಭೇಟಿ ನೀಡಿದ್ದರು.
ಯಾರಿಗೂ ಮಾಹಿತಿ ನೀಡದೆ ರಹಸ್ಯವಾಗಿ ಪತ್ನಿಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಸುದೀಪ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹೋಮದಲ್ಲಿ ಪಾಲ್ಗೊಂಡು ಪೂರ್ಣಾಹುತಿ ಸಲ್ಲಿಸಿದ ನಂತರ ದೇವಸ್ಥಾನದ ಹಿಂದಿನ ಬಾಗಿಲ ಮೂಲಕ ಹೊರಗೆ ಹೋಗಿ ಬೆಂಗಳೂರಿಗೆ ಪ್ರಯಾಣಿಸಿದರು.
ಸುದೀಪ್ ಆಗಮಿಸಿರುವ ಮಾಹಿತಿಯಿಂದಾಗಿ ದೇವಸ್ಥಾನದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಪೂಜೆ ನಂತರದಲ್ಲಿ ಮಾಧ್ಯಮದವರು ಹಾಗೂ ಅಭಿಮಾನಿಗಳಿಗೆ ಪುನೀತ್ ಭೇಟಿಯಾಗಲಿದ್ದಾರೆ ಎಂದು ದೇವಸ್ಥಾನದ ಅರ್ಚಕರು ಹೇಳಿದ್ದರು.
ಆದರೆ ಯಾರಿಗೂ ಭೇಟಿಯಾಗದೆ ಹಿಂಭಾಗಿಲ ಮೂಲಕ ಸುದೀಪ್ ಪ್ರಯಾಣ ಬೆಳೆಸಿದ್ದರಿಂದ ದೇವಸ್ಥಾನದ ಮುಂಭಾಗದಲ್ಲಿ ಬಿರು ಬಿಸಿಲಿನಲ್ಲಿ ತಮ್ಮ ಅಭಿಮಾನಿ ನಟನನ್ನು ನೋಡಲು ನೆರೆದಿದ್ದ ಅಭಿಮಾನಿಗಳು ನಿರಾಸೆಯಿಂದ ಹಿಂತಿರುಗುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net