ನಟ ಪುನೀತ್ ನೊಂದವರಿಗೆ ದನಿಯಾಗಿದ್ದರು: ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಬಣ್ಣನೆ

4
Published on

ಮೈಸೂರು: ನಟ ಪುನೀತ್ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುವುದರೊಂದಿಗೆ ಸಮಾಜ ಸೇವೆಯ ಮೂಲಕ ನೊಂದವರ ಮತ್ತು ಶೋಷಿತ ಸಮುದಾಯಕ್ಕೆ ದನಿಯಾಗಿದ್ದರು ಎಂದು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಬಣ್ಣಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮಹಿಳಾ ಘಟಕ, ಮೈಸೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನಿಂದ ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟ ಡಾ.ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ನುಡಿ ನಮನ, ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎತ್ತರದ ಸ್ಥಾನಕ್ಕೆ ಏರಿದವರು ಸಾಮಾಜಿಕ ಸೇವೆಯಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎನ್ನುವುದಕ್ಕೆ ಪುನೀತ್ ಉದಾಹರಣೆಯಾಗಿದ್ದರು. ತಮ್ಮ ನಟನೆ, ಚಿತ್ರರಂಗದ ಕಾರ್ಯಚಟುವಟಿಕೆ ಜತೆಗೆ ಸಾಕಷ್ಟು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೂ ಎಲ್ಲಿಯೂ ಈ ಬಗ್ಗೆ ಪ್ರಚಾರ ಮಾಡಿಕೊಳ್ಳದೆ ಯಾರಿಗೂ ತಿಳಿಯದಂತೆ ಸಹಾಯ ಮಾಡುತ್ತಿದ್ದ ದೊಡ್ಡ ವ್ಯಕ್ತಿತ್ವ ಅವರದ್ದು. ಅವರ ಆದರ್ಶ ಎಲ್ಲರಿಗೂ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪುನೀತ್ ನೆನಪಿನಲ್ಲಿ ಅವರ ಕುರಿತು ಸಾಹಿತಿಗಳು, ಚುಟುಕು ಸಾಹಿತ್ಯವನ್ನು ರಚಿಸಿದ್ದು, ಅವುಗಳನ್ನೆಲ್ಲ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವುದು ಮೆಚ್ಚುಗೆಯ ಕಾರ್ಯ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಇಂದಿನ ಕಾರ್ಯಕ್ರಮದಲ್ಲಿ 253 ಚುಟುಕುಗಳಿಂದ ಸಮೃದ್ಧವಾಗಿದ್ದ ‘ಅಭಿನವ ಸಾಮ್ರಾಟ್ ಡಾ.ಪುನೀತ್ ಚುಟುಕುಗಳ ಕೃತಿ’ ಲೋಕರ್ಪಾಣೆಯಾಗಬೇಕಿತ್ತು. ಅನಿವಾರ್ಯ ಕಾರಣಗಳಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮುಂದೆ ಕಾರ್ಯಕ್ರಮ ಬಿಡುಗಡೆಗೊಳ್ಳಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಸಂಶೋಧನಾ ಪ್ರಬಂಧ ಸಿದ್ಧಪಡಿಸಿರುವ ಲೇಖಕಿ ಮಾನ್ಯಾ ಕಾರ್ಯಪ್ಪ ಅವರು ಪುನೀತ್ ಅವರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು.
ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್.ಅರಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ಲೋಕೇಶಪ್ಪ, ಅಭಿನವ ಸಾಮ್ರಾಟ್ ಪುನೀತ್ ಚುಟುಕು ಕೃತಿ ಸಂಪಾದಕರಾದ ಲೇಖಕಿ ರತ್ನಾ ಹಾಲಪ್ಪಗೌಡ, ಶ್ರೀನಿವಾಸ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net