

ನಂಜನಗೂಡು: ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತಿ ಪಡೆದಿರುವ ಬಹುಭಾಷಾ ನಟ ಪ್ರಭುದೇವ ದೂರ ಗ್ರಾಮದ ಬಳಿ ಇರುವ ಕೆಂಬಾಲು ಗ್ರಾಮದಲ್ಲಿ ಶ್ರೀ ಮಲೆ ಮಹದೇಶ್ವರ ದೇಗುಲವನ್ನು ತಾಯಿಯ ಆಸೆಯಂತೆ ಜೀರ್ಣೋದ್ಧಾರ ಮಾಡಿಸಿದ್ದಾರೆ.
ಕೆಂಬಾಲು ಗ್ರಾಮದಲ್ಲಿರುವ ನೂರಾರು ವರ್ಷಗಳ ಪುರಾತನ ಹೊಯ್ಸಳರ ಕಾಲದ ಮಲೆ ಮಹದೇಶ್ವರ ದೇವಾಲಯವನ್ನು ಬಹುಭಾಷಾ ನಟ, ನಿರ್ದೇಶಕ ಪ್ರಭುದೇವ 25 ಲಕ್ಷ ರೂ.ಗೂ ಹೆಚ್ಚು ಹಣ ವಿನಿಯೋಗಿಸಿ ಜೀರ್ಣೋದ್ಧಾರ ಮಾಡಿಸಿದ್ದಾರೆ.
ಪ್ರಭುದೇವರ ತಾಯಿ ಮಹಾದೇವಮ್ಮ ಮೈಸೂರು ತಾಲೂಕಿನ ದೂರ ಗ್ರಾಮದವವರು. ಹಲವು ವರ್ಷಗಳ ನಂತರ ಚೆನ್ನೈನಿಂದ ತಮ್ಮ ತವರು ಊರಾದ ಮೈಸೂರಿಗೆ ಆಗಮಿಸಿ ಮನೆ ನಿರ್ಮಿಸಿಕೊಂಡು ವಾಸ ಮಾಡಲು ಆರಂಭಿಸಿದರು. ಕೆಂಬಾಲು ಗ್ರಾಮದ ಬಳಿ ತಮ್ಮ ಪೂರ್ವಜರ ನಾಲ್ಕು ಎಕರೆ ಜಮೀನನ್ನು ನೋಡಿಕೊಳ್ಳಲು ಬರುತ್ತಿದ್ದರು. ಶಿಥಿಲಾವಸ್ಥೆಯಲ್ಲಿದ್ದ ಮಲೆ ಮಹದೇಶ್ವರ ದೇವಾಲಯ ಕಂಡು ಮರುಗುತ್ತಿದ್ದರು. ದೇಗುಲ ಜೀರ್ಣೋದ್ಧಾರ ಮಾಡುವಂತೆ ಮಗನಲ್ಲಿ ಕೇಳಿಕೊಂಡರು. ತಾಯಿ ಆಸೆಯಂತೆ ಪ್ರಭುದೇವ ದೇವಾಲಯ ಜೀರ್ಣೋದ್ಧಾರಗೊಳಿಸಿದ್ದಾರೆ.
ದೇವಾಲಯದ ಸುತ್ತ ಸುಮಾರು ನಾಲ್ಕಕ್ಕೂ ಅಧಿಕ ಕಲ್ಲು ಕಂಬಗಳು ಬಿದ್ದಿದ್ದವು. ಕೆಂಬಾಲು ಗ್ರಾಮದ ಅಕ್ಕಪಕ್ಕದಲ್ಲಿರುವ ಬಿದರಗೂಡು, ದೂರ, ರಾಂಪುರ, ಹುಲ್ಲಹಳ್ಳಿ ಗ್ರಾಮಸ್ಥರು ಮಳೆ ಬಾರದೆ ಇದ್ದಾಗ ತಾವು ಬೆಳೆದಿದ್ದ ತರಕಾರಿ ಮತ್ತು ದವಸ ಧಾನ್ಯಗಳನ್ನು ತಂದು ಈ ದೇವರ ಮುಂಭಾಗದಲ್ಲಿ ಎಡೆ ಸೇವೆ ಮಾಡಿ ಭಕ್ತಾದಿಗಳಲ್ಲಿ ಹಂಚಿ ತಾವು ಊರು ತಲುಪುವ ಮೊದಲೇ ಮಳೆಯಾಗುತ್ತಿತ್ತಂತೆ. ಈ ಹಿನ್ನೆಲೆಯಲ್ಲಿ ಈ ದೇವಾಲಯವನ್ನು ಮಳೆ ಮಹದೇಶ್ವರನ ದೇವಾಲಯ ಎಂದು ಕರೆಯುದುಂಟು.
ದೇಗುಲ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರನಿಗೆ ಮಂಗಳವಾರದಿಂದಲೇ ಪೂಜಾ ಕೈಂಕರ್ಯ ಆರಂಭವಾಯಿತು. ಮಂಗಳವಾರ ಸಂಜೆ 8 ಗಂಟಗೆ ಆಗಮಿಸಿದ ನಟ ಪ್ರಭುದೇವ ಗಣಪತಿ ಹೋಮ, ಗಂಗಾಪೂಜಾ, ಕಳಸ ಪೂಜೆಯಲ್ಲಿ ಭಾಗಿಯಾದರು. ಬುಧವಾರ ಮುಂಜಾನೆ 6ಕ್ಕೆ ದೇಗುಲಕ್ಕೆ ಆಗಮಿಸಿ ಹೋಮ, ಕಳಸ ಪ್ರತಿಷ್ಠಾಪನೆ, ಮಹಾ ರುದ್ರಭಿಷೇಕ ಹಾಗೂ ಮಹಾಮಂಗಳಾರತಿಗಳಲ್ಲಿ ಭಾಗಿಯಾಗಿದ್ದರು.
ದೇವಾಲಯ ಉದ್ಘಾಟನೆಯನ್ನು ಕಾರ್ಯ ಮಠದ ಶ್ರೀಮಹದೇಶ್ವರ ಸ್ವಾಮೀಜಿ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಭುದೇವರ ಪತ್ನಿ ಹಿಮಾನಿ, ತಾಯಿ ಮಹದೇವಮ್ಮ, ತಮ್ಮ ನಾಗೇಂದ್ರಪ್ರಸಾದ್, ಅಕ್ಕ ಭಾಗ್ಯಾ, ತಮ್ಮ ನಾಗಣ್ಣ, ತಮ್ಮನ ಪತ್ನಿ ದೇವಮಣಿ, ಗೀತಾ, ಶಿವರಾಜು ಮತ್ತು ಇಡೀ ಕುಟುಂಬ ಈ ಧಾರ್ಮಿಕ ಕೈಂಕರ್ಯದಲ್ಲಿ ಭಾಗಿಯಾಗಿದ್ದರು.