

ಉಡುಪಿ: ಅಮ್ಮನ 40 ವರ್ಷದ ಕನಸನ್ನು ನೆರವೇರಿಸಿದ ಸಂತೃಪ್ತಿಯಾಗುತ್ತಿದೆ. ಹುಟ್ಟೂರಾದ ಕುಂದಾಪುರಕ್ಕೆ ನನ್ನನ್ನು ಕರೆದುಕೊಂಡು ಬಂದು ಉಡುಪಿ ಶ್ರೀ ಕೃಷ್ಣನ ದರ್ಶನ ಮಾಡಿಸುವುದು ನನ್ನಮ್ಮನ ಕನಸಾಗಿತ್ತು. ಅವರ ಜನ್ಮದಿನವಾದ ಸೆ.2 ರ ಮೊದಲು ಅವರಿಗೆ ಇದಕ್ಕಿಂತ ದೊಡ್ಡ ಉಡುಗೊರೆ ಕೊಡಲು ಏನು ಸಾಧ್ಯ?...
.ಹೀಗೆಂದವರು ತೆಲುಗು ಸಿನೆಮಾ ಇಂಡಸ್ಟ್ರಿ ಖ್ಯಾತ ನಟ ಜೂ.ಎನ್.ಟಿ.ಆರ್.
ಶನಿವಾರ ಶ್ರೀಕೃಷ್ಣಮಠಕ್ಕೆ ತೆಲುಗು ಚಿತ್ರರಂಗದ ಪ್ರಸಿದ್ದ ನಟ ಜ್ಯೂನಿಯರ್ ಎನ್‌ಟಿಆರ್ (Jr NTR) ಅವರು ಶನಿವಾರ ಭೇಟಿ ನೀಡಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಪಡೆದರು. ತಮ್ಮ ತಾಯಿ ಶಾಲಿನಿ ನಂದಾಮುರಿ ಅವರೊಂದಿಗೆ ಉಡುಪಿಗೆ ಆಗಮಿಸಿದ್ದ ಅವರು ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದು ಕೋಟಿಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕರಿಸಿದರು. ಶ್ರೀ ಮಠದ ಪ್ರಸನ್ನ ಆಚಾರ್ಯ ಉಪಸ್ಥಿತರಿದ್ದರು.
ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು 40 ವರ್ಷದಿಂದ ನನ್ನ ಅಮ್ಮನ ಆಸೆ ಇದಾಗಿತ್ತು. ಮಗನನ್ನೊಮ್ಮೆ ಕೃಷ್ಣಮಠಕ್ಕೆ ಕರೆದುಕೊಂಡು ಬರಬೇಕು ಎಂಬ ಆಸೆ ಇವತ್ತು ಈಡೇರಿದೆ. ಶ್ರಾವಣ ಮಾಸದ ವಿಶೇಷ ದಿನ ಹರಕೆ ಈಡೇರಿದ್ದು ಸಂತೋಷವಾಗಿದೆ. ಇದೆಲ್ಲವೂ ಶ್ರೀಕೃಷ್ಣನ ಸ್ಕ್ರೀನ್ ಪ್ಲೇ ಎಂದರು.
ನನ್ನ ಅಮ್ಮನ ಪೂರ್ವಿಕರು ಮೂಲತಃ ಕುಂದಾಪುರದವರು. ಕೃಷ್ಣಮಠಕ್ಕೆ ಭೇಟಿಕೊಟ್ಟು ಮನಶಾಂತಿ ಸಿಕ್ಕಿದೆ. ಸರ್ವೇ ಜನ ಸುಖಿನೋ ಭವಂತು ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ. ನಾನು ಮನೆಯಲ್ಲಿ ಪ್ರತಿದಿನ ಉಡುಪಿ ಊಟ ಮಾಡುತ್ತೇನೆ, ಕೃಷ್ಣಮಠದಲ್ಲಿ ಮಾಡುವ ಊಟವನ್ನು ನಾನು ಪ್ರತಿದಿನ ಮನೆಯಲ್ಲೇ ಮಾಡುತ್ತೇನೆ ಎಂದವರು ನುಡಿದರು.
ನಟ ಹಾಗೂ ನಿರ್ದೇಶಕ ರಿಷಭ ಶೆಟ್ಟಿ ಮಾತನಾಡಿ,ಜೂ.ಎನ್ ಟಿ ಆರ್ ಹಾಗು ನನ್ನದು ಅಣ್ಣ ತಮ್ಮನ ಸಂಬಂಧ. ಅವರು ಆಂಧ್ರಪ್ರದೇಶದವರು ಎಂಬ ಭಾವನೆ ಬಂದಿಲ್ಲ, ಬಹಳ ಸಮಯದ ನಂತರ ಭೇಟಿಯಾಗುವ ಅವಕಾಶ ಸಿಕ್ಕಿತು. ಇತ್ತೀಚೆಗೆ ಉಡುಪಿ ಮಠಕ್ಕೆ ಬರಬೇಕು ಎಂದು ಹೇಳಿಕೊಂಡಿದ್ದರು. ನಾನು ಉಡುಪಿಯಲ್ಲಿ ಇದ್ದೆ, ಹಾಗಾಗಿ ಜೊತೆಗೆ ಮಠಕ್ಕೆ ಬಂದೆ. ಉಡುಪಿ ಅಷ್ಟಮಿಗೆ ಬರಬೇಕಾಗಿತ್ತು ಸಾಧ್ಯವಾಗಿರಲಿಲ್ಲ, ಎನ್.ಟಿ.ಆರ್ ಕುಟುಂಬದ ಜೊತೆ ಬಂದಿರೋದು ಖುಷಿಯಾಗಿದೆ. ಕಾಂತರಾ ಪ್ರೀಕ್ವೆಲ್ ಚಿತ್ರೀಕರಣ ಆಗುತ್ತಿದೆ ಎಂದರು. ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗಿದ್ದರು .