

ಮೈಸೂರು: ನಟ ಡಾ.ವಿಷ್ಣುವರ್ಧನ್ ಅವರ ಜನ್ಮ ದಿನಾಚರಣೆ ಅಂಗವಾಗಿ ಬುಧವಾರ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಕೇಕ್ ಕತ್ತರಿಸಲಾಯಿತು. ಅಲ್ಲದೆ ಅನ್ನ ಸಂತರ್ಪಣೆ, ಚಂದನ ಶ್ರೀನಿವಾಸ್ ತಂಡದಿಂದ ವಿಷ್ಣುವರ್ಧನ್ ಅಭಿನಯಿಸಿದ ಚಿತ್ರಗೀತೆಗಳ ಹಾಡು, ಕಲಾವಿದ ಅರ್ಜುನ್ ಆರ್ಯ ಅವರಿಂದ ವಿಷ್ಣುವರ್ಧನ್ ಅವರ ವರ್ಣ ತೈಲಚಿತ್ರ ಪ್ರದರ್ಶನ ಆಯೋಜಿಸಲಾಗಿತ್ತು.
ಸಾಹಸಸಿಂಹ ಡಾ.ವಿಷ್ಣುವರ್ಧನ್ ಬಳಗ ಹಾಗೂ ಸಂಘಗಳ ಒಕ್ಕೂಟದಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ ಮಾತನಾಡಿ, ನೆಚ್ಚಿನ ನಟನ ಹುಟ್ಟುಹಬ್ಬವನ್ನು ಪ್ರತಿವರ್ಷದಂತೆ ಈ ವರ್ಷವು ಸಮಾಜಮುಖಿಯಾಗಿ ಆಚರಣೆ ಮಾಡಲಾಯಿತು ಎಂದು ಹೇಳಿದರು.
ಮಹಾನ್ ನಟರ ನಡುವೆಯೂ ಮೊದಲ ಚಿತ್ರದಿಂದ ಕೊನೆಯ ಚಿತ್ರದವರೆಗೆ ಅಭಿಮಾನಿಗಳಿಗೆ ರಸದೌತಣ ಉಣಬಡಿಸಿದ ಮಹಾನ್ ನಟ ಎಂದು ಸ್ಮರಿಸಿದರು.
ಹಿರಿಯ ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ ಮಾತನಾಡಿ, ಸಾಹಸ ಸಿಂಹ, ಕನ್ನಡಿಗರ ಕಣ್ಮಣಿ ಡಾ.ವಿಷ್ಣುವರ್ಧನ್ ಮಾನವೀಯ ಮೌಲ್ಯಗಳ ಹರಿಕಾರರಾಗಿ, ಉತ್ತಮ ನಟನೆಯ ಮೂಲಕ ಜನ ಮಾನಸದಲ್ಲಿ ಇನ್ನು ಅಚ್ಚ ಹಸಿರಾಗಿದ್ದಾರೆ ಎಂದರು.
ಗಾಂಧಿಚೌಕ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಮುಬಾರಕ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ರೂಪದರ್ಶಿ ರೇಣುಕಾ ಹೊರಕೇರಿ, ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಮುಖಂಡರಾದ ಎಂ.ಆರ್.ಬಾಲಕೃಷ್ಣ, ಸಕಲಿ ಮಹದೇವ್, ಕುಮಾರ್, ಜಬಿ, ಬಸವಣ್ಣ, ಜಿ.ರಾಘವೇಂದ್ರ, ರಾಜೇಶ್ ಪಳನಿ, ರವಿಚಂದ್ರ, ಕಡಕೊಳ ಶಿವಲಿಂಗ, ಮಹಾದೇವ್, ನವೀನ್ ಇತರರು ಇದ್ದರು.