

ಅವಿನಾಶ್ ಜೈನಹಳ್ಳಿ ಮೈಸೂರುಪ್ರತಿವರ್ಷ ವಿಶ್ವ ಯೋಗ ದಿನವನ್ನು ಜೂನ್ 21ರಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ.
ಮಾನಸಿಕ ಒತ್ತಡ ನಿವಾರಣೆ ಮತ್ತು ದೈಹಿಕ ಸೌಂದರ್ಯಕ್ಕಾಗಿ ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಹೆಚ್ಚಿನ ಜನರು ಯೋಗದ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿರುವುದೇ ಇದಕ್ಕೆ ಮೂಲ ಕಾರಣ. ಇಂತಹ ಕಲೆಯನ್ನು ಶತಮಾನಗಳಿಂದ ಜನಸಾಮಾನ್ಯರಿಗೆ ತಲುಪಿಸುವ ಜತೆಗೆ ಜನಪ್ರಿಯಗೊಳಿಸಿದ ಕೀರ್ತಿ ದೇಶದ ಅನೇಕ ಯೋಗ ಗುರುಗಳಿಗೆ ಸಲ್ಲುತ್ತದೆ. ಅಂತೆಯೆ, ಪ್ರತಿಯೊಬ್ಬ ಕನ್ನಡಿಗರಲ್ಲಿ ಯೋಗವನ್ನು ಜನಪ್ರಿಯಗೊಳಿಸಿದ ಹಿರಿಮೆ ವರನಟ ಡಾ.ರಾಜ್‌ಕುಮಾರ್ ಅವರಿಗೆ ಸಲ್ಲಬೇಕು. ಹೀಗಾಗಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಡಾ.ರಾಜ್‌ಕುಮಾರ್ ಸ್ಮರಣಾರ್ಹರು.
ಭಾರತೀಯ ಯೋಗ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ತಿರುಮಲೆ ಕೃಷ್ಣಮಾಚಾರ್ಯ, ಬಿ.ಕೆ.ಎಸ್.ಐಯಂಗಾರ್, ಶ್ರೀಕೃಷ್ಣ ಪಟ್ಟಾಭಿ ಜೋಯಿಸ್ ಸೇರಿದಂತೆ ಹಲವರು ಯೋಗವನ್ನು ಕಾಲಕಾಲಕ್ಕೆ ಅಭಿವೃದ್ಧಿಪಡಿಸಿದರು. ಅಂತೆಯೆ, ಕನ್ನಡಿಗರಲ್ಲಿ ಯೋಗವನ್ನು ಜನಪ್ರಿಯಗೊಳಿಸಿ, ಆ ಬಗ್ಗೆ ಆಸಕ್ತಿ ಹೆಚ್ಚಾಗುವಂತೆ ಮಾಡಿದವರು ಡಾ.ರಾಜ್‌ಕುಮಾರ್.
‘ಬಂಗಾರದ ಮನುಷ್ಯ’ ಸಿನಿಮಾ ಮೂಲಕ ರೈತರ ಹತಾಶೆಯ ಬದುಕಿನಲ್ಲಿ ಭರವಸೆ ತುಂಬಿದ ಡಾ.ರಾಜ್‌ಕುಮಾರ್ ಅವರು, ‘ಕಾಮನಬಿಲ್ಲು’ ಚಿತ್ರದ ಮೂಲಕ ಯೋಗಾಸನದ ಮಹತ್ವ ತಿಳಿಸಿಕೊಟ್ಟರು. ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದರೂ 1970-80ರ ದಶಕದಲ್ಲಿ ಯೋಗದ ಕುರಿತು ಬಹುತೇಕರಿಗೆ ಹೆಚ್ಚಾಗಿ ತಿಳಿದಿರಲಿಲ್ಲ. ಕೆಲವರಂತೂ ಯೋಗವೆಂದರೆ ಧ್ಯಾನ ಎಂದಷ್ಟೇ ತಿಳಿದಿದ್ದರು. ಅಂತಹ ಸಮಯದಲ್ಲಿ ಸ್ವತಃ ಯೋಗಪಟುವಾಗಿದ್ದ ರಾಜ್‌ಕುಮಾರ್ ಯೋಗಾಸನದ ಮೂಲಕ ದೇಹವನ್ನು ದಂಡಿಸಬಹುದು. ಧ್ಯಾನ ಮಾಡಿ ಏಕಾಗ್ರತೆ ಗಳಿಸಬಹುದು. ಯೋಗದಲ್ಲೂ ವಿಶೇಷತೆ ಇದ್ದು, ಅಧ್ಯಾತ್ಮ, ಉತ್ತಮ ನಡವಳಿಕೆ, ಲೋಕಕಲ್ಯಾಣದ ಚಿಂತನೆಗಳಿವೆ ಎಂಬುದನ್ನು ದೃಶ್ಯ ಮಾಧ್ಯಮದ ಮೂಲಕ ತಿಳಿಸಿಕೊಟ್ಟರು. ಆ ಮೂಲಕ ಅವರು ಯೋಗದ ಮೊದಲ ಐಕಾನ್ ಆಗಿ ಕಾಣಸಿಗುತ್ತಾರೆ.
ಸಿನಿಮಾದ ಪಾತ್ರಗಳಿಂದ ಮಾತ್ರ ಡಾ.ರಾಜ್‌ಕುಮಾರ್ ಜನರಿಗೆ ಆದರ್ಶವಾಗಲಿಲ್ಲ. ಅವರ ಬದುಕಿನ ಪ್ರತಿ ಹೆಜ್ಜೆಯೂ ಅನುಕರಣೀಯ, ಆದರ್ಶಪ್ರಾಯವಾಗಿತ್ತು. ಬದುಕಿದರೆ ಹೀಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟ ಮಾನವತಾವಾದಿ ಅವರು. 70-80ರ ದಶಕದಲ್ಲಿಯೇ ಯೋಗ, ಧ್ಯಾನ, ಫಿಟ್‌ನೆಸ್, ದೇಹ ದಂಡನೆಯನ್ನು ಎಲ್ಲರಿಗೂ ತೋರಿಸಿಕೊಟ್ಟರು.
ಡಾ.ರಾಜ್‌ಕುಮಾರ್ ನಟನೆಯ ‘ಬಂಗಾರದ ಮನುಷ್ಯ’ ಬಹುತೇಕರ ಮನಪರಿವರ್ತಿಸುವಲ್ಲಿ ಯಶಸ್ವಿಯಾಗಿತ್ತು. ಅಂದು ಆ ಸಿನಿಮಾ ನೋಡಿದ್ದ ಅನೇಕರು ಪಟ್ಟಣಗಳಿಂದ ಮತ್ತೆ ಹಳ್ಳಿಗಳಿಗೆ ಹೋಗಿ ವ್ಯವಸಾಯ ಮಾಡಲು ಶುರು ಮಾಡಿದ್ದರು. ಕೃಷಿ ಮೂಲಕವೇ ಬದುಕು ಕಟ್ಟಿಕೊಂಡಿದ್ದರು. ಅಂತೆಯೆ, ‘ಕಾಮನಬಿಲ್ಲು’ ಸಿನಿಮಾ ನೋಡಿದ ಹಲವರು ಯೋಗ ಕಲಿತರು, ಯೋಗವನ್ನು ತಮ್ಮ ಜೀವನದ ಭಾಗವಾಗಿಸಿಕೊಂಡರು.
ಡಾ.ರಾಜ್‌ಕುಮಾರ್ ಅವರು ‘ಕಾಮನಬಿಲ್ಲು’ ಮೂಲಕ ಯೋಗ ಪಾಠ ಮಾಡಿದ್ದಾರೆ. ಆ ಸಿನಿಮಾದಲ್ಲಿ ಚಂದ್ರಾನುಲೋಮ, ಸೂರ್ಯಾನುಲೋಮ, ಚಂದ್ರಭೇದನ, ಸೂರ್ಯಭೇದನ ಮತ್ತು ನಾಡಿಶೋಧನ ಪ್ರಾಣಾಯಾಮಗಳು ಹಾಗೂ ಊರ್ಧ್ವಮುಖ, ಅಧೋಮುಖ, ಪದ್ಮಮಯೂರಾಸನ, ಕೂರ್ಮಾಸನ, ಮಶ್ಚಾಸನ, ಮುಕ್ತಹಸ್ತ ಶೀರ್ಷಾಸನ, ಉಪವಿಷ್ಟ ಕೋನಾಸನ ಸೇರಿದಂತೆ ಇತರ ಆಸನಗಳನ್ನು ಅತ್ಯಂತ ಚಿತ್ತಾಕರ್ಷಕ, ಮನಮೋಹಕ, ಕಣ್ಮನ ಸೆಳೆಯುವ ರೀತಿಯಲ್ಲಿ ಪ್ರದರ್ಶಿಸಿದ್ದರು.
ಅಲ್ಲದೆ ಯೋಗ, ಆಸನಗಳು, ಪ್ರಾಣಾಯಾಮ, ಧ್ಯಾನದ ಪರಿಚಯ ಮತ್ತು ಮಹತ್ವ, ಯೋಗಗುರುಗಳು ಹಾಗೂ ಸಾಧಕರ ಬಗ್ಗೆ ತಿಳಿಸಿಕೊಟ್ಟಿದ್ದರು. ಯೋಗ ಗುರುಗಳನ್ನು ಜನರು ಹೇಗೆ ಪೂಜಿಸುತ್ತಾರೆ, ಯೋಗಗುರು ಹೇಗೆ ಶ್ರೀಸಾಮಾನ್ಯರ ಬಳಿ ಹೊಂದಿಕೊಂಡು ಹೋಗುತ್ತಾರೆ ಎನ್ನುವುದನ್ನೂ ತೋರಿಸಿಕೊಟ್ಟಿದ್ದರು.
ಪ್ರಮುಖವಾಗಿ ಷಟ್ಕರ್ಮ ಕ್ರಿಯೆಗಳಾದ ಜಲನೀತಿ, ಸೂತ್ರನೀತಿ, ದಂಡ ನೀತಿಗಳನ್ನು ಪ್ರದರ್ಶಿಸಿದ್ದು ಜನರನ್ನು ಹೆಚ್ಚು ಆಕರ್ಷಿಸುವಂತೆ ಮಾಡಿತ್ತು. ‘ಕಾಮನಬಿಲ್ಲು’ ಸಿನಿಮಾ ಚಿತ್ರೀಕರಣ ನಂಜನಗೂಡಿನ ಕಳಲೆ ಗ್ರಾಮದಲ್ಲಿ ನಡೆದಿದ್ದು ಮತ್ತೊಂದು ವಿಶೇಷ.
ರಾಜ್‌ಕುಮಾರ್ ಅವರು ಯೋಗಾಭ್ಯಾಸದ ಮೊರೆ ಹೋಗಿದ್ದು 70ರ ದಶಕದ ಕೊನೆಯಲ್ಲಿ. ಆಗಲೇ ಅವರಿಗೆ 50 ವರ್ಷ ವಯಸ್ಸಾಗಿತ್ತು. ಯೋಗಗುರು ನಾಯ್ಕರ್ ಅವರಿಂದ ಯೋಗ ಕಲಿತ ಅವರು, ಅದನ್ನು ತಮ್ಮ ನಿತ್ಯ ಜೀವನದ ಭಾಗವಾಗಿಸಿಕೊಂಡಿದ್ದರು. ಬೆಳಗ್ಗೆ ಬೇಗ ಎದ್ದು, ಯೋಗ ಮಾಡಿ, ಆನಂತರ ದಿನಚರಿ ಮುಂದುವರಿಸುತ್ತಿದ್ದರು.
ಯೋಗ ಕಲಿಯುವುದಕ್ಕಿಂತ ಮೊದಲು ರಾಜ್‌ಕುಮಾರ್ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತು. ಬೆನ್ನುನೋವು ಅವರನ್ನು ಬಾಧಿಸುತ್ತಿತ್ತು ಎನ್ನಲಾಗಿದೆ. ಆದರೆ ನಿರಂತರ ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕವಾಗಿ ಸಾಕಷ್ಟು ಬಲಿಷ್ಠರಾದ ಅವರು, ಯೋಗವನ್ನು ಕೊನೆಯವರೆಗೂ ಬಿಡಲಿಲ್ಲ. ತಾವು ಮಾತ್ರ ಯೋಗಭ್ಯಾಸ ಮಾಡದೆ, ಪತ್ನಿ ಪಾರ್ವತಮ್ಮ ಅವರಿಗೂ ಯೋಗಭ್ಯಾಸದ ಪರಿಚಯ ಮಾಡಿಸಿದ್ದರು.
ಶ್ರೀಕೃಷ್ಣ ಪಟ್ಟಾಭಿ ಜೋಯಿಸ್ ಹಾಗೂ ಬಿಕೆಎಸ್ ಐಯಂಗಾರ್ ಅವರ ಬಳಿಯೂ ಕೆಲವು ಸಲಹೆ ಪಡೆದಿದ್ದ ನಾಯ್ಕರ್, ರಾಜ್‌ಕುಮಾರ್ ಅವರಿಗೆ ಹಠ(ಕಠಿಣ) ಯೋಗ ಮತ್ತು ಅಷ್ಟಾಂಗ ಯೋಗ ಮಾರ್ಗಗಳನ್ನು ಹೇಳಿಕೊಟ್ಟಿದ್ದರು. ಆ ಮೂಲಕ ರಾಜ್‌ಕುಮಾರ್ ಅವರು ಯೋಗದಲ್ಲಿ ಉನ್ನತ ಮಟ್ಟಕ್ಕೆ ಹೋಗಲು ನೆರವಾಗಿದ್ದರು.