ನಟ ದರ್ಶನ್‌ಗೆ ರಾಜಾತಿಥ್ಯ ಸರಿಯಲ್ಲ

darshan
Published on

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೊಲೆ ಆರೋಪಿ ನಟ ದರ್ಶನ್‌ಗೆ ರಾಜಾತಿಥ್ಯ ನೀಡಿರುವುದು ತಪ್ಪು. ಈ ಸಂಬಂಧ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಜೈಲಿನಲ್ಲಿ ಯಾವ ಕೈದಿಗಳಿಗೂ ವಿಶೇಷ ಆತಿಥ್ಯ ನೀಡುವಂತಿಲ್ಲ. ದರ್ಶನ್ ಪ್ರಕರಣದಲ್ಲಿ ಆಗಿರುವುದು ಸರಿಯಲ್ಲ. ಜೈಲಿನ ಅಧಿಕಾರಿಗಳೂ ತಪ್ಪು ನಡೆಯದಂತೆ ನಿಗಾ ವಹಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಪ್ರಕರಣ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ತಪ್ಪು ಮಾಡಿ ಜೈಲು ಸೇರಿದ ಎಲ್ಲರಿಗೂ ಒಂದೇ ರೀತಿ ಸೌಲಭ್ಯ ಸಿಗಬೇಕು. ಇಲ್ಲದಿದ್ದರೆ ಜನರಿಗೆ ವ್ಯವಸ್ಥೆಯ ಬಗ್ಗೆ ಬೇಸರ ಉಂಟಾಗುತ್ತದೆ. ಯಾರೇ ಪ್ರಭಾವಿ ವ್ಯಕ್ತಿ ಅಥವಾ ಹಿರಿಯ ಅಧಿಕಾರಿಗಳ ಪ್ರಭಾವಕ್ಕೆ ಒಳಗಾಗದೆ ಕಾನೂನು ಚೌಕಟ್ಟಿನಲ್ಲಿ ಅಧಿಕಾರಿಗಲು ಕಾರ್ಯನಿರ್ವಹಿಸಬೇಕು ಎಂದರು.

ಪ್ರಭಾವಿಗಳ ಒತ್ತಡಕ್ಕೆ ಮಣಿದಾಗ ಅಧಿಕಾರಿಗಳು ಸಹ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ದರ್ಶನ್ ರಾಜಾತಿಥ್ಯಕ್ಕೆ ಸಂಬಂಧಿಸಿದಂತೆ 9 ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಬೇರೆ ಅಧಿಕಾರಿಗಳಿಗೆ ಇದು ಸಂದೇಶವಾಗಿ ರವಾನೆಯಾಗಿದ್ದು, ಇನ್ನು ಮುಂದೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net