ಆರು ತಿಂಗಳ ನಂತರ ಮೈಸೂರಿಗೆ ಆಗಮಿಸಿದ ನಟ ದರ್ಶನ್

Darshan
Published on

ಮೈಸೂರು: ಜಾಮೀನು ಮೇಲೆ ಬಿಡುಗಡೆ ಹೊಂದಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಶುಕ್ರವಾರ ಮೈಸೂರಿಗೆ ಆಗಮಿಸಿದರು.

ಆಪ್ತರೊಂದಿಗೆ ಮಧ್ಯಾಹ್ನ ಮೈಸೂರಿಗೆ ಆಗಮಿಸಿದ ಅವರು, ನಗರದ ಹೊರವಲಯದಲ್ಲಿರುವ ತಿ.ನರಸೀಪುರ ರಸ್ತೆಯ ವಿನೀಶ್ ಫಾರಂ ಹೌಸ್‌ನಲ್ಲಿ ಉಳಿದುಕೊಂಡಿದ್ದಾರೆ. ದರ್ಶನ್ ಅವರೊಂದಿಗೆ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್, ನಟ ಧನ್ವೀರ್ ಇದ್ದಾರೆ. ದರ್ಶನ್ ತಾಯಿ ಮೀನಾ ತೂಗುದೀಪ್ ಮೈಸೂರಿನ ಮನೆಯಿಂದ ತೋಟದ ಮನೆಗೆ ತೆರಳಿ ದರ್ಶನ್ ಅವರನ್ನು ಭೇಟಿಯಾದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಬಂಧನಕ್ಕೆ ಒಳಗಾಗುವ ಮುಂಚೆ ಅವರು ನಗರದ ಹೊರವಲಯದಲ್ಲಿರುವ ತೋಟದ ಮನೆಯಲ್ಲಿ ಇದ್ದರು. ಚಿತ್ರವೊಂದರ ಶೂಟಿಂಗ್‌ನಲ್ಲಿ ಭಾಗವಹಿಸಲು ನಗರದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಆ ಸಂದರ್ಭ ಅವರನ್ನು ಪೊಲೀಸರು ಬಂಧಿಸಿದ್ದರು. ಆರು ತಿಂಗಳ ನಂತರ ಇದೀಗ ಅವರು ಮತ್ತೆ ನಗರಕ್ಕೆ ಆಗಮಿಸಿದ್ದಾರೆ.

ಎರಡು ವಾರಗಳ ಮೈಸೂರಿನಲ್ಲಿಯೇ ಇರಲು ನ್ಯಾಯಾಲಯದಲ್ಲಿ ಅನುಮತಿ ಸಿಕ್ಕಿರುವುದರಿಂದ ದರ್ಶನ್ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ. ತೋಟದ ಮನೆಯಲ್ಲಿ ಯಾವುದೇ ಚಿತ್ರೀಕರಣ ಮಾಡಬಾರದು ಎಂಬ ಉದ್ದೇಶದಿಂದ ಟಾರ್ಪಲ್‌ಗಳನ್ನು ಅಳವಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net