ಕಾವೂರು ಬ್ರಹ್ಮಕಲಶಕ್ಕೆ ಕಾರ್ಯಕರ್ತರು ಭಕ್ತಿಯ ಬೆವರು ಸುರಿಸಿದ್ದಾರೆ - ಧನ್ಯೋತ್ಸವದಲ್ಲಿ ಅಜಿತ್ ಕುಮಾರ್ ರೈ ಮಾಲಾಡಿ ಕೃತಜ್ಞತೆ

mng--16 march Kavoor
Published on

ಮಂಗಳೂರು: ಕಾವೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಕಾರ್ಯಕರ್ತರು ಅರ್ಪಣಾ ಮನೋಭಾವದಿಂದ ರಾತ್ರಿ ಹಗಲೆನ್ನದೆ ಭಕ್ತಿಯ ಬೆವರು ಸುರಿಸಿದ್ದಾರೆ. ಅವರಿಗೆಲ್ಲರಿಗೂ ಶ್ರೀ ದೇವರ ಅನುಗ್ರಹ ಸದಾ ಇರಲಿ ಎಂದು ಶ್ರೀ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು.

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದ ನೂತನ ಸಭಾಭವನದಲ್ಲಿ ಬ್ರಹ್ಮಕಲಶದ ಯಶಸ್ಸಿಗೆ ಶ್ರಮಿಸಿದ ಸ್ವಯಂ ಸೇವಕರಿಗೆ ಭಾನುವಾರ ಆಯೋಜಿಸಿದ ಧನ್ಯೋತ್ಸವ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ, ಯಾರ ಮನಸ್ಸಿಗೂ ನೋವಾಗದಂತೆ ಎಲ್ಲಾ ಸಮಿತಿಯವರು ವ್ಯವಸ್ಥಿತವಾಗಿ ಭಕ್ತಿಯಿಂದ, ಪ್ರೀತಿಯಿಂದ ಸೇವೆ ಮಾಡಿದ್ದಾರೆ. ದೇವರ ಸೇವೆಯಲ್ಲಿ ಸಾರ್ಥಕ್ಯವನ್ನು ಕಂಡಿದ್ದೇವೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆಶಿಕ್ ಬಳ್ಳಾಲ್ ಕೂಳೂರುಬೀಡು ಮಾತನಾಡಿ, ಸುಮಾರು 4 ಸಾವಿರಕ್ಕಿಂತಲೂ ಅಧಿಕ ಸ್ವಯಂ ಸೇವಕರು ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಿದ್ದಾರೆ. ಎಲ್ಲಾ ವ್ಯವಸ್ಥೆಗಳು ಅಚ್ಚುಕಟ್ಟಾಗಿ ನಡೆದು ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ಊರ ಹಾಗೂ ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಇದೊಂದು ಸ್ಮರಣೀಯ ಬ್ರಹ್ಮಕಲಶವಾಗಿದೆ ಎಂದರು.

ಶ್ರೀ ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ಮಾತನಾಡಿ, ಪ್ರತಿಯೊಬ್ಬರೂ ದೇವರ ಸೇವೆ ಎಂದು ಭಾವಿಸಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಮುಂದೆ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಮೋಹನ ಪ್ರಭು ದೇವಸ ಉಪಸ್ಥಿತರಿದ್ದರು. ಸಂಘಟನಾ ಸಂಚಾಲಕ ಪಿ.ಎಸ್.ಪ್ರಕಾಶ್, ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ.ಸದಾಶಿವ ಶೆಟ್ಟಿ ಬೊಲ್ಪುಗುಡ್ಡೆ, ಮನಪಾ ನಿಕಟಪೂರ್ವ ಸದಸ್ಯೆ ಗಾಯತ್ರಿ ರಾವ್, ಕಾವೂರು ಇನ್‌ಸ್ಪೆಕ್ಟರ್ ರಾಘವೇಂದ್ರ, ಸ್ವಾಗತ ಸಮಿತಿಯ ಪ್ರಶಾಂತ ಪೈ, ಪಾಕಶಾಲಾ ಸಮಿತಿಯ ಸಂಚಾಲಕ ಆನಂದ ಶೆಟ್ಟಿ, ಅನ್ನಸಂತರ್ಪಣೆ ಸಮಿತಿಯ ರಣದೀಪ್ ಕಾಂಚನ್, ಮಾಧ್ಯಮ ಸಮಿತಿಯ ಹರೀಶ್ ಮೋಟುಕಾನ ಮೊದಲಾದವರು ಅನಿಸಿಕೆ ವ್ಯಕ್ತಪಡಿಸಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಧಾಕರ ಆಳ್ವ ಸ್ವಾಗತಿಸಿದರು. ಪುರುಷೋತ್ತಮ ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net