

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾಜಿ ಸಚಿವ ಸಿ.ಟಿ. ರವಿ ಅವರನ್ನು ಬೆಳಗಾವಿಯಿಂದ ಬೆಂಗಳೂರಿಗೆ ಕರೆದೊಯ್ಯುತ್ತಿದ್ದ ಸಮಯದಲ್ಲಿ ಅವರ ಭೇಟಿಗಾಗಿ ನೂರಾರು ಬಿಜೆಪಿ ಕಾರ್ಯಕರ್ತರು ಇಲ್ಲಿನ ನರೇಂದ್ರ ಕ್ರಾಸ್ ಬಳಿ ಶುಕ್ರವಾರ ಜಮಾಯಿಸಿದ್ದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಅಶ್ಲೀಲ ಪದ ಬಳಕೆ ಆರೋಪದ ಮೇಲೆ ಬಂಧನವಾಗಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಬೆಳಗಾವಿಯಿಂದ ರಸ್ತೆ ಮೂಲಕ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ವಿಷಯ ಅರಿತ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲಿ ಜಮಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಿ.ಟಿ. ರವಿ ಅವರಿದ್ದ ವಾಹನ ನರೇಂದ್ರ ಕ್ರಾಸ್ ಬಳಿ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ವಾಹನ ಬಳಿ ತೆರಳಿ ರವಿ ಅವರ ಪರ ಜೈ ಕಾರ ಮೊಳಗಿಸಿದರು. ಆದರೆ ಪೊಲೀಸರು ವಾಹನ ನಿಲುಗಡೆ ಮಾಡದೆ ಮುಂದೆ ಸಾಗುತ್ತಿದ್ದಂತೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನೂರಾರು ಕಾರ್ಯಕರ್ತರನ್ನು ಕಂಡ ಸಿ.ಟಿ. ರವಿ ಕಾರಿನೊಳಗಿನಿಂದಲೇ ಕೈ ಬೀಸಿದರು. ನೂರಾರು ಕಾರ್ಯಕರ್ತರು ಸೇರಿದ್ದರಿಂದ ಅಹಿತಕರ ಟನೆ ನಡೆಯದಂತೆ ಮುನ್ನೆಚ್ಚರಿಕೆಗಾಗಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು.