ಮುದ್ದೇಬಿಹಾಳದಲ್ಲಿ ಹೋರಾಟಗಾರರ ಸಂಭ್ರಮ

mbl 14-4
ಮುದ್ದೇಬಿಹಾಳದ ಬಸವೇಶ್ವರ ವೃತ್ತದಲ್ಲಿ ರೈಲು ಮಾರ್ಗ ಹೋರಾಟಗಾರರು ಬುಧವಾರ ರಾತ್ರಿ ಪಟಾಕಿ ಸಿಡಿಸಿ, ಜಯಘೋಷದೊಂದಿಗೆ ಸಂಭ್ರಮಿಸಿದರು. ವಾಸುದೇವ ಶಾಸಿ, ಬಸಯ್ಯ ನಂದಿಕೇಶ್ವರಮಠ, ಕಿರಣ್ ಪಾಟೀಲ, ರಾಜಶೇಖರ ಹೊಳಿ, ಶೇಖರ ಢವಳಗಿ ಇತರರಿದ್ದಾರೆ.
Published on

ಮುದ್ದೇಬಿಹಾಳ: ಈ ಭಾಗದ ಬಹುದಶಕಗಳ ಬೇಡಿಕೆಯಾಗಿದ್ದ ಆಲಮಟ್ಟಿ-ಮುದ್ದೇಬಿಹಾಳ-ಯಾದಗಿರಿ ನೂತನ ರೈಲು ಮಾರ್ಗದ ಅಂತಿಮ ಸಮೀಕ್ಷೆಗೆ ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ಆದೇಶ ಹೊರಡಿಸಿರುವುದು ಈ ಭಾಗದ ಹೋರಾಟಗಾರರ ಸಂಭ್ರಮಕ್ಕೆ ಕಾರಣವಾಗಿದೆ.

ಬುಧವಾರ ಸಂಜೆ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡು ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಅಭಿನಂದಿಸಿರುವುದು ಈ ಹರ್ಷಕ್ಕೆ ಅವಕಾಶ ಮಾಡಿಕೊಟ್ಟಿದೆ.

ಒಟ್ಟು 162 ಕಿ.ಮೀ. ಉದ್ದದ ಈ ಮಾರ್ಗದ ಅಂತಿಮ ಸಮೀಕ್ಷೆಗೆ 4.05 ಕೋಟಿ ರೂ. ಖರ್ಚು ತಗಲುತ್ತದೆ. ಅಂತಿಮ ಸಮೀಕ್ಷೆಯಾದಲ್ಲಿ ನೂತನ ರೈಲು ಮಾರ್ಗದ ಕಾಮಗಾರಿ ಶೀಘ್ರ ಆರಂಭಕ್ಕೆ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ ಎಂದು ಸಚಿವರು ಟ್ವೀಟಿಸಿದ್ದು ಹೋರಾಟಕ್ಕೆ ಸಿಕ್ಕ ಪ್ರತಿಲ ಎನ್ನುವ ಮಾತು ಕೇಳಿಬರುತ್ತಿದೆ.

ಆಲಮಟ್ಟಿ-ಯಾದಗಿರಿ ರೈಲು ಮಾರ್ಗವು ಬ್ರಿಟೀಷರ ಅವಧಿಯಲ್ಲೇ ಪ್ರಾರಂಭಗೊಂಡಿತ್ತು. ಸ್ವಾತಂತ್ರೃ ಸಂಗ್ರಾಮದ ಕಾವು ಹೆಚ್ಚಾಗತೊಡಗಿದ್ದರಿಂದ ಕಾಮಗಾರಿ ಗುತ್ತಿಗೆ ಹಿಡಿದಿದ್ದ ಬ್ರಿಟಿಷ್ ಗುತ್ತಿಗೆದಾರ ತನ್ನ ದೇಶಕ್ಕೆ ಮರಳಿದ್ದರು. ಅಂದಿನಿಂದ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭ ಈ ಭಾಗದ ಹೋರಾಟಗಾರರ ಬೇಡಿಕೆ ಮನ್ನಿಸಿ ಸಮೀಕ್ಷೆಗೆ ಸೂಚಿಸಿದ್ದರು. ಆಗ ಸಮೀಕ್ಷೆ ಸರಿಯಾಗಿ ನಡೆಯದೆ ನಕಾರಾತ್ಮಕ ವರದಿ ಸಲ್ಲಿಕೆಯಾಗಿತ್ತು. ಆದರೂ ಈ ಭಾಗದ ಹೋರಾಟಗಾರರು ತಮ್ಮ ಬೇಡಿಕೆಯನ್ನು ಜೀವಂತವಾಗಿರಿಸಿದ್ದರು. ರೈಲ್ವೆ ಸಚಿವ ಸೋಮಣ್ಣ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಕೆಲವರು ದೆಹಲಿಗೂ ಹೋಗಿ ಬೇಡಿಕೆಯ ಮನವಿ ಸಲ್ಲಿಸಿದ್ದರು. ಹೋರಾಟದ ಪರಿಣಾಮ, ಈ ಭಾಗದವರ ಒತ್ತಾಸೆಯಿಂದಾಗಿ ಇದೀಗ ಅಂತಿಮ ಸಮೀಕ್ಷೆಗೆ ಸೂಚನೆ ನೀಡಿರುವುದು ಹರ್ಷಕ್ಕೆ ಕಾರಣವಾಗಿದೆ ಎಂದು ಹೋರಾಟ ಸಮಿತಿ ಪದಾಧಿಕಾರಿಗಳಾಗಿರುವ ಕಿರಣ್‌ರಾಜ್ ಪಾಟೀಲ, ಬಸವರಾಜ ನಂದಿಕೇಶ್ವರಮಠ, ಮಾಣಿಕಚಂದ ದಂಡಾವತಿ ಇನ್ನಿತರರು ಹರ್ಷ ಹಂಚಿಕೊಂಡಿದ್ದಾರೆ.

ಪಟಾಕಿ ಸಿಡಿಸಿ ಸಂತಸ: ವಿಷಯ ತಿಳಿಯುತ್ತಿದ್ದಂತೆಯೇ ರೈಲು ಮಾರ್ಗದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಇಲ್ಲಿನ ಯುವಕರು, ಮುಖಂಡರು ರಾತ್ರಿಯೇ ಬಸವೇಶ್ವರ ವೃತ್ತದಲ್ಲಿ ಸೇರಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ವಾಸುದೇವ ಶಾಸಿ, ಪ್ರಭು ಕಡಿ, ಪಾರಸ ಪೋರವಾಲ, ಶೇಖರ ಢವಳಗಿ, ಶ್ರೀಕಾಂತ ಹಿರೇಮಠ, ರಾಜಶೇಖರ ಹೊಳಿ, ಬುಡ್ಡಾ ಕುಂಟೋಜಿ, ಗುರು ಸಾಲಿಮಠ ಇನ್ನಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net