

ಶಿವಮೊಗ್ಗ: ನಂಬಿಕೊಂಡು ಬಂದಿರುವ ವಿಚಾರ, ಸಿದ್ಧಾಂತಕ್ಕೆ ಬದ್ಧವಾದ ಪಕ್ಷ ನಮ್ಮದು. ಕಾರ್ಯಕರ್ತರೇ ಬಿಜೆಪಿಯ ಪ್ರೇರಕ ಶಕ್ತಿ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟಾ ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ಜನ್ಮ ತಾಳಿದ ಸಂದರ್ಭವೇ ವಿಶೇಷವಾಗಿತ್ತು. ಈ ನೆಲದ ಸಂಸ್ಕೃತಿ, ಸಂಸ್ಕಾರವನ್ನು ಗಟ್ಟಿಗೊಳಿಸುವುದು ಪಕ್ಷದ ಮುಖ್ಯ ನಿಲುವಾಗಿದೆ ಎಂದರು.
ಪಕ್ಷ ಇನ್ನಷ್ಟು ಸರ್ವವ್ಯಾಪಿ ಹಾಗೂ ಸರ್ವಸ್ಪರ್ಶಿಯಾಗಲು ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪಕ್ಷವನ್ನು ಮತ್ತಷ್ಟು ಬೆಳೆಸಲು ಸದಸ್ಯತ್ವ ಅಭಿಯಾನ ಮಹತ್ತರವಾಗಿದೆ. ಸದಸ್ಯರು ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಬೇಕೆಂಬ ಕಾರಣದಿಂದ ಸಾಮಾನ್ಯ ಸದಸ್ಯತ್ವ ಮತ್ತು ಸಕ್ರಿಯ ಸದಸ್ಯ ಎಂದು ಎರಡು ಹಂತದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸುಮಾರು 20 ಕೋಟಿ ಸದಸ್ಯರಿರುವ ವಿಶ್ವದ ಅತಿದೊಡ್ಡ ಪಕ್ಷ ನಮ್ಮದು. ಮಹಿಳೆಯರು ಮತ್ತು 18-25 ವರ್ಷದೊಳಗಿನ ಯುವಜನರ ಮನಸ್ಸುಗಳಿಗೆ ಪಕ್ಷ ಇನ್ನಷ್ಟು ಹತ್ತಿರವಾಗಬೇಕಿದೆ ಎಂದು ಹೇಳಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಕೋಷ್ಠಗಳ ಸಂಯೋಜಕ ಎಸ್.ದತ್ತಾತ್ರಿ, ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ ಮುಂತಾದವರಿದ್ದರು.