ಜೋಕಟ್ಟೆ ಎಂಆರ್‌ಪಿಎಲ್ ಹಸಿರು ವಲಯ ಭೂಸ್ವಾಧೀನಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಎಂಆರ್‌ಪಿಎಲ್ ಹಸಿರು ವಲಯಕ್ಕೆ ಭೂಸ್ವಾಧೀನ
ಸಂಸದರ ನೇತೃತ್ವದಲ್ಲಿ ಡಿಸಿ ಕಚೇರಿಯಲ್ಲಿ ಸಭೆ
27 ಎಕರೆ ಜಾಗದಲ್ಲಿದೆ 408 ಮನೆಗಳು
ಮಂಗಳೂರು: ಎಂಆರ್‌ಪಿಎಲ್ 3ನೇ ಹಂತದ ಯೋಜನೆಗೆ ಹಸಿರು ವಲಯಕ್ಕಾಗಿ ಜೋಕಟ್ಟೆಯಲ್ಲಿ ಜನವಸತಿ ಪ್ರದೇಶದ 27 ಎಕರೆ ಭೂಸ್ವಾಧೀನ ಮಾಡಬೇಕಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಸೋಮವಾರ ಸಭೆ ನಡೆಯಿತು. ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ದರ್ಶನ್ ಇದ್ದರು.
ಜೋಕಟ್ಟೆ, ಕಳವಾರು, ಕೆಂಜಾರು ಪ್ರದೇಶದ 408 ಮನೆಗಳು ಮತ್ತು ಮನೆಮಂದಿಯ ಜಮೀನುಗಳು 27 ಎಕರೆಯಲ್ಲಿ ಹರಡಿಕೊಂಡಿದೆ. ಇದರ ಪಕ್ಕದಲ್ಲೇ ಎಂಆರ್‌ಪಿಎಲ್ ಕೋಕ್ ಸಲ್ಫರ್ ಘಟಕವಿದೆ. ಇದರಿಂದ ಇಲ್ಲಿ ಶಬ್ದಮಾಲಿನ್ಯ, ಪರಿಸರ ಮಾಲಿನ್ಯ ಉಂಟಾಗಿದೆ. ಪರಿಹಾರ ಕೊಡಿ ನಾವೇ ಸ್ಥಳಾಂತರಗೊಳ್ಳುತ್ತೇವೆ ಎಂದು ಜೋಕಟ್ಟೆ ಜನರೇ ಹೇಳುತ್ತಿದ್ದರು. ಇದಕ್ಕೆ ತಕ್ಕಂತೆ ಅಲ್ಲಿ ಹಸಿರು ವಲಯ ನಿರ್ಮಾಣಕ್ಕೆ 27 ಎಕರೆಯನ್ನು ಎಂಆರ್‌ಪಿಎಲ್ ಗುರುತಿಸಿತ್ತು. ಪರಿಹಾರ ಧನ ನಿಗದಿಪಡಿಸಿ ಎಲ್ಲ ಪ್ರಕ್ರಿಯೆಯನ್ನು ನಡೆಸಲಾಗಿತ್ತು.
ಕಳೆದೊಂದು ವಾರದಿಂದ ಪ್ರತಿಭಟನೆ
ಈ ನಡುವೆ ಸ್ಥಳಾಂತರಕ್ಕೆ ನಿಗದಿಪಡಿಸಿದ ಪರಿಹಾರ ನೀಡಲು ಜಿಲ್ಲಾಡಳಿತ ವಿಳಂಬ ಮಾಡುತ್ತಿದೆ. ಮಾತ್ರವಲ್ಲದೆ KIADB ಮೂಲಕ ಮತ್ತೆ ಭೂಸ್ವಾಧೀನ ನಡೆಸಿ ಮತ್ತಷ್ಟು ವಿಳಂಬ ಮಾಡಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಕಳೆದೊಂದು ವಾರದಿಂದ ಜೋಕಟ್ಟೆಯಲ್ಲಿ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಸ್ಥಳೀಯರಿಂದ ನಿರಂತರ ಪ್ರತಿಭಟನೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಪ್ರಜಾಸೌಧದಲ್ಲಿ ಸಭೆ ನಡೆಯಿತು.
8 ತಿಂಗಳೊಳಗೆ ಎಲ್ಲ ಪ್ರಕ್ರಿಯೆ ಪೂರ್ಣ
ಜಿಲ್ಲಾಡಳಿತವೇ ಮಧ್ಯಸ್ಥಿಕೆ ವಹಿಸಿ ಏಕಗಂಟಿನ ಪರಿಹಾರ ವಿತರಿಸಬೇಕು. ಇತರ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕು ಎಂದು ಸಭೆಯಲ್ಲಿ ಹೋರಾಟಗಾರ ಮುನೀರ್ ಕಾಟಿಪಳ್ಳ ಅವರು ಆಗ್ರಹಿಸಿದರು. ಸ್ಥಳೀಯರಿಗೆ ಮತ್ತು ಹೋರಾಟಗಾರರಿಗೆ ತಪ್ಪು ಮಾಹಿತಿ ಹೋಗಿರುವುದು. ಹಾಗೆಯೇ KIADB (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ಭೂಸ್ವಾಧೀನದಿಂದ ಜನರಿಗಾಗುವ ಲಾಭವೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ವಿವರಿಸಿದರು. ಸಂತ್ರಸ್ತರು ಎಲ್ಲ ದಾಖಲೆಗಳನ್ನು ಶೀಘ್ರವಾಗಿ ಸಲ್ಲಿಸಬೇಕು. 8 ತಿಂಗಳೊಳಗೆ KIADBಯ ಎಲ್ಲ ಪ್ರಕ್ರಿಯೆಗಳೂ ಮುಗಿಯುತ್ತದೆ ಎಂದರು. ಅನಂತರ ಚರ್ಚೆಗಳು ನಡೆದವು. ಸಂಸದರು, ಶಾಸಕರು ಕೂಡ ಅನಿಸಿಕೆ ವ್ಯಕ್ತಪಡಿಸಿ, ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಮಾತನಾಡಿ ಶೀಘ್ರವಾಗಿ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಕೊನೆಯಲ್ಲಿ KIADB ವತಿಯಿಂದ ಭೂಸ್ವಾಧೀನಕ್ಕೆ ಸಭೆಯಲ್ಲಿ ಉಪಸ್ಥಿತರಿದ್ದ ಸಂತ್ರಸ್ತರು ಮತ್ತು ಹೋರಾಟಗಾರರು ಒಪ್ಪಿಗೆ ಸೂಚಿಸಿದರು. ಕೂಡಲೇ ಪ್ರಕ್ರಿಯೆಯನ್ನು ಪ್ರಾರಂಭಿಸಿ ಶೀಘ್ರಗತಿಯಲ್ಲಿ ಭೂಸ್ವಾಧೀನ ಮಾಡುವಂತೆ KIADB ಅಧಿಕಾರಿಗಳಿಗೆ ಡಿಸಿ ಸೂಚಿಸಿದರು. ಅಪರ ಡಿಸಿ ರಾಜು ಕೆ., ಎಂಆರ್‌ಪಿಎಲ್ ಎಂಡಿ ಎಂ.ಎಸ್. ಕಾಮತ್, ಅಧಿಕಾರಿಗಳಾದ ಗೋಕುಲದಾಸ್ ನಾಯಕ್, ಮೇಘನಾ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ನಾಗರಿಕ ಹೋರಾಟ ಸಮಿತಿ ಮುಖಂಡರಾದ ಮುನೀರ್ ಕಾಟಿಪಳ್ಳ, ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ, ಜೋಕಟ್ಟೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಸಂಶುದ್ದೀನ್, ವಿಜಯ ಕುಮಾರ್, ಶ್ರೀನಾಥ್, ಮಹಮ್ಮದ್ ಜಾಬೀರ್, ಜಯಂತ್, ಮನೋಜ್ ಮತ್ತಿತರರು ಸಭೆಯಲ್ಲಿದ್ದರು.