

ಮೈಸೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದವರು ಸಕ್ರೀಯವಾಗಿ ಪಾಲ್ಗೊಂಡು ಜಾತಿ ಹಾಗೂ ಉಪ ಜಾತಿ ಕಾಲಂ ಎರಡರಲ್ಲೂ ಮಾದಿಗ ಎಂದೇ ಬರೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮನವಿ ಮಾಡಿದರು.
ಸಮೀಕ್ಷೆಯಲ್ಲಿ ಸಮುದಾಯದವರು ಸಮರ್ಪಕವಾದ ಮಾಹಿತಿ ಒದಗಿಸಿದರೆ ಮುಂದಿನ ದಿನಗಳಲ್ಲಿ ಸರ್ಕಾರದಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಲಿದೆ. ಹಾಗಾಗಿ ಯಾರೂ ಸಹ ಸಮೀಕ್ಷೆಯನ್ನು ನಿರ್ಲಕ್ಷಿಸಬಾರದು. ಸಮೀಕ್ಷೆಯಿಂದ ನಮ್ಮ ಸಮಾಜದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ತಿಳಿಯುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಚ್.ಎನ್. ನಾಗಮೋಹನ್ ದಾಸ್ ನೀಡಿರುವ ವರದಿಯಲ್ಲಿ ಮಾದಿಗ ಸಮುದಾಯದ ಜನಸಂಖ್ಯೆ ಮೊದಲ ಸ್ಥಾನದಲ್ಲಿದೆ. ಹಾಗಾಗಿ, ಈಗ ಶುರು ಮಾಡುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದವರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಂ.ಶಿವಣ್ಣ, ಸಮಾಜದ ಮುಖಂಡರಾದ ಸುಧಾ ಮಹದೇವ್, ನಿಂಗರಾಜ್, ಎಂ. ಶಿವಮೂರ್ತಿ, ಪಾಳ್ಯ ರಾಚಪ್ಪ, ಶಿವಸ್ವಾಮಿ, ದುರ್ಗೇಶ್, ರಾಚಯ್ಯ ಇದ್ದರು.