

ಕೆ.ಆರ್.ನಗರ: ರೈತರಿಗೆ ಆರ್ಥಿಕವಾಗಿ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಸರ್ಕಾರ ರಾಗಿ ಮತ್ತು ಭತ್ತ ಸೇರಿದಂತೆ ಇತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ ಸರ್ಕಾರವೇ ರೈತರಿಂದ ನೇರವಾಗಿ ಖರೀದಿಸುತ್ತಿದ್ದು, ರೈತರ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ 2024-25ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಭತ್ತ ಮತ್ತು ರಾಗಿ ಕೇಂದ್ರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ಸಾಲಿಗ್ರಾಮ, ಚುಂಚನಕಟ್ಟೆ ಮತ್ತು ಕೆ.ಆರ್.ನಗರದಲ್ಲಿ ಖರೀದಿ ಕೇಂದ್ರ ತೆರೆಯಲಾಗಿದ್ದು, ರೈತರು ನೇರವಾಗಿ ಖರೀದಿ ಕೇಂದ್ರಕ್ಕೆ ಭತ್ತ ಮತ್ತು ರಾಗಿ ಸರಬರಾಜು ಮಾಡಬೇಕು ಎಂದರು.
ಪ್ರತಿ ಕ್ವಿಂಟಾಲ್ ಭತ್ತಕ್ಕೆ 2300, ಗ್ರೇಡ್-ಎ 2320 ರೂ. ನಿಗದಿ ಮಾಡಲಾಗಿದ್ದು, ಪ್ರತಿ ಎಕರೆಗೆ ಕನಿಷ್ಠ 25 ರಿಂದ 50 ಕ್ವಿಂಟಾಲ್ ವರೆಗೆ ಖರೀದಿ ಮಾಡಲಾಗುತ್ತಿದ್ದು, ಕ್ವಿಂಟಾಲ್ ರಾಗಿಗೆ 4290 ರೂ.ನಂತೆ 10 ಕ್ವಿಂಟಾಲ್‌ನಿಂದ 20 ಕ್ವಿಂಟಾಲ್‌ವರೆಗೆ ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮಾಹಿತಿ ನೀಡಿದರು.
ಖರೀದಿ ಕೇಂದ್ರದಲ್ಲಿ ಪಡೆದಂತಹ ರಾಗಿಯನ್ನು ನೇರವಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರದಾರರಿಗೆ ವಿತರಿಸುವುದರಿಂದ ಗುಣಮಟ್ಟದ ರಾಗಿಯನ್ನು ಖರೀದಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಶಾಸಕರು, ಈ ಬಾರಿ ಬೆಳೆದಂತಹ ರಾಗಿಯನ್ನು ಮಾತ್ರ ಪಡೆಯಬೇಕು. ಹಣದ ಆಸೆಗಾಗಿ ಮಧ್ಯವರ್ತಿಗಳಿಗೆ ಆದ್ಯತೆ ನೀಡಿ ಮತ್ತು ಹಳೇ ರಾಗಿ ಖರೀದಿ ಮಾಡಿರುವುದು ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ತಲೆದಂಡವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ರೈತರಿಗೆ ಅನುಕೂಲ ಮಾಡುವ ಸಲುವಾಗಿ ಸರ್ಕಾರ ಬೆಂಬಲ ಬೆಲೆಯಲ್ಲಿ ಭತ್ತ ಮತ್ತು ರಾಗಿ ಖರೀದಿ ಮಾಡುತ್ತಿದ್ದು, ಖರೀದಿ ಕೇಂದ್ರದ ಅಧಿಕಾರಿಗಳು ಮಧ್ಯವರ್ತಿಗಳು ಹಾಗೂ ಇತರ ಏಜೆಂಟ್‌ಗಳಿಗೆ ಆಧ್ಯತೆ ನೀಡಬಾರದು. ರೈತರಿಗೆ ಸರ್ಕಾರದ ಸೌಲಭ್ಯ ದೊರೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಈ ಬಗ್ಗೆ ಸಂಬಂಧ ಪಟ್ಟ ಆಹಾರ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಸೂಚಿಸಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ಪುರಸಭೆ ಅಧ್ಯಕ್ಷ ಶಿವುನಾಯಕ್, ಸದಸ್ಯ ಕೋಳಿಪ್ರಕಾಶ್, ಸೈಯದ್‌ಸಿದ್ದಿಕ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಜೆ.ಎಚ್.ನಾಗೇಂದ್ರ, ಮಾಜಿ ನಿರ್ದೇಶಕರಾದ ಎಚ್.ಪಿ.ಪ್ರಶಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್ ಜಾಬೀರ್, ರೈತ ಮುಖಂಡರಾದ ಎಂ.ಜೆ.ಕುಮಾರ್, ಜಿ.ಆರ್.ಮಹದೇವ್, ಜಯರಾಮೇಗೌಡ, ಆಹಾರ ಇಲಾಖೆ ಶಿರಸ್ತೇದ್ದಾರ್ ಮಂಜುನಾಥ್, ಎಪಿಎಂಸಿ ಕಾರ್ಯದರ್ಶಿ ಮಹೇಶ್, ಖರೀದಿ ಕೇಂದ್ರ ಅಧಿಕಾರಿಗಳಾದ ಮಂಜುನಾಥ್ ವಡ್ಡರ್, ರಾಜು ತಿಪ್ಪಾಶೆಟ್ಟಿ, ಡಾ.ಸಿದ್ದಗಂಗಯ್ಯ ಇತರರಿದ್ದರು.