ಅನುಮತಿ ಪಡೆಯದೆ ಆಸ್ಪತ್ರೆ, ಕ್ಲಿನಿಕ್ ಆರಂಭಿಸಿದರೆ ಕ್ರಮ

BLY- 10-8
ಡಾ.ವೈ.ರಮೇಶ್ ಬಾಬು
Published on

ಬಳ್ಳಾರಿ: ಜಿಲ್ಲೆಯಲ್ಲಿ ವೈದ್ಯಕೀಯ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರುವ ವೈದ್ಯರು ಕೆಪಿಎಂಇ ಕಾಯ್ದೆಯಡಿಯಲ್ಲಿ ನೋಂದಾಯಿಸಿಕೊಂಡು ಕ್ಲಿನಿಕ್, ಪಾಲಿ ಕ್ಲಿನಿಕ್, ನರ್ಸಿಂಗ್ ಹೋಮ್ ಅಥವಾ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳನ್ನು ಆರಂಭಿಸಬೇಕು. ಇಲ್ಲದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ ಕಾಯ್ದೆ 2007 ಮತ್ತು 2009 ರ ನಿಯಮಗಳು ಹಾಗೂ ಕಾಲ ಕಾಲಕ್ಕೆ ಆದ ತಿದ್ದುಪಡಿ ಅನುಸಾರ ಅಂಗೀಕೃತ ವೈದ್ಯಕೀಯ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರುವ ವೈದ್ಯರು ಕಡ್ಡಾಯವಾಗಿ ಕೆಪಿಎಂಇ ಕಾಯ್ದೆಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಿಂದ ಕೆಪಿಎಂಇ ಕಾಯ್ದೆಯಡಿ ನೋಂದಣಿ ಪ್ರಮಾಣ ಪತ್ರವನ್ನು ಪಡೆದ ನಂತರವೇ ಆರಂಭಿಸುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ನಿರ್ಲಕ್ಷಿೃಸಿದರೆ ಅನುಮತಿ ಪಡಿಯದೆ ಆರಂಭಿಸಿದರೆ ಕೆಪಿಎಂಇ ಕಾಯ್ದೆ ಉಲ್ಲಂಘನೆ ಎಂದು ಪರಿಗಣಿಸಿ ಸಂಬಂಧಪಟ್ಟವರ ವಿರುದ್ಧ ಕೆಪಿಎಂಇ ಕಾಯ್ದೆ ಕಲಂ 19, 20, 21 ಹಾಗೂ 22 ರ ಅನುಸಾರ ದಂಡ ವಿಧಿಸಲಾಗುವುದೆಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅನುಮತಿ ಪಡೆಯದೆ ಖಾಸಗಿ ಕೇಂದ್ರಗಳನ್ನು ತೆರೆದಿರುವ ಒಂದು ಆಸ್ಪತ್ರೆ, ಎರಡು ಪಾಲಿ ಕ್ಲಿನಿಕ್, ಒಂದು ಪ್ರಯೋಗಾಲಯ ಹಾಗೂ ಒಂದು ಕ್ಲಿನಿಕ್ ವಿರುದ್ಧ ಸಿರಗುಪ್ಪ ತಾಲೂಕಿನಲ್ಲಿ ತಲಾ 50 ಸಾವಿರ ರೂ. ನಂತೆ ಒಟ್ಟು 2.50 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಅಧಿಕೃತ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ ಮಾಡುವವರಿಗೆ ಕೆಪಿಎಂಇ ಕಾಯ್ದೆ ಅನುಸಾರ ಎಫ್‌ಐಆರ್ ದಾಖಲು ಮಾಡಲಾಗುತ್ತಿದೆ. ಈಗಾಗಲೇ ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮ, ಬಳ್ಳಾರಿ ನಗರದ ಬೆಳಗಲ್ ಕ್ರಾಸ್ ಮತ್ತು ಮಿಲ್ಲರ್‌ಪೇಟೆಯಲ್ಲಿ ಯಾವುದೇ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೆ ವೈದ್ಯ ವೃತ್ತಿ ನಡೆಸುತ್ತಿದ್ದ ಮೂವರು ನಕಲಿ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿ ತಲಾ 50 ಸಾವಿರ ರೂ. ನಂತೆ ಒಟ್ಟು 1.50 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಯಾವುದೇ ಮನೆ ಅಥವಾ ಮಳಿಗೆಗಳನ್ನು ಆಸ್ಪತ್ರೆ, ಕ್ಲಿನಿಕ್ ಹಾಗೂ ಪ್ರಯೋಗಾಲಯ ಮುಂತಾದವುಗಳಿಗೆ ಬಾಡಿಗೆ ಕೊಡುವ ಮುನ್ನ ಸಂಬಂಧಪಟ್ಟ ಮನೆ ಹಾಗೂ ಕಟ್ಟಡದ ಮಾಲೀಕರು ವೈದ್ಯರ ಅಧಿಕೃತ ವೈದ್ಯಕೀಯ ಪ್ರಮಾಣವನ್ನು ಪರಿಶೀಲಿಸಿ ನಂತರ ಬಾಡಿಗೆ ಕೊಡಬೇಕು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net