ವಾರ್ಡ ಅಭಿವೃದ್ಧಿ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗುವುದು

Action will be taken for ward development work.
ಬೀಳಗಿ ಪಟ್ಟಣ ಪಂಚಾಯತ ಸಾಮಾನ್ಯ ಸಭೆ ಪಪಂ ಅಧ್ಯಕ್ಷ ಮುತ್ತು (ರಾಮಚಂದ್ರ) ಬೋರ್ಜಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ, ಉಪಾಧ್ಯಕ್ಷೆ ಕಲಾವತಿ ಗಡ್ಡದ ಇದ್ದಾರೆ.
Published on

ಬೀಳಗಿ: ಪಟ್ಟಣದ ಕುಡಿಯುವ ನೀರಿನ ಕಾಮಗಾರಿ ಶೇ. 70ರಷ್ಟು ಪೂರ್ಣಗೊಂಡಿದ್ದು, ಎಪ್ರಿಲ್ ತಿಂಗಳಿನಿಂದ 24*7 ಕುಡಿಯು ನೀರು ದೊರೆಯಲಿದೆ. ಈಗಾಗಲೇ ಬೀಳಗಿ ಪಟ್ಟಣದ ಮತ್ತು ಆಶ್ರಯ ಕಾಲೋನಿಯಲ್ಲಿ ಪೈಪ್‌ಲೈನ್ ಕಾಮಗಾರಿ ಮುಕ್ತಾಯ ಹಂತದಲ್ಲಿ ಇದೆ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ ತಿಳಿಸಿದರು.

ಪಪಂ ಅಧ್ಯಕ್ಷ ಮುತ್ತು (ರಾಮಚಂದ್ರ) ಬೋರ್ಜಿ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಪಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ 18 ವಾರ್ಡಗಳಲ್ಲಿ ಶೌಚಾಲಯ ನವೀಕರಣ ಮಾಡಿ ಜನರಿಗೆ ಒದಗಿಸಲಾಗುವುದು. ಪಪಂ ಸದಸ್ಯರ ಗಮನಕ್ಕೆ ತಂದು ವಾರ್ಡಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಪಪಂ ಸದಸ್ಯ ಸಿದ್ದು ಮಾದರ ಮಾತನಾಡಿ, ಪಟ್ಟಣದ ಕೆಲವೆಡೆ ಯಾವುದೇ ಮೂಲ ಸೌಲಭ್ಯಗಳಿಲ್ಲದೆ ಲೇಔಟ್ ಮಾಡಲಾಗುತ್ತಿದೆ. ಅಂತಹವುಗಳಿಗೆ ಪರವಾನಗಿ ನೀಡಬಾರದು. ಈ ವಿಷಯದಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳ ಮಾತಿಗೂ ಮನ್ನಣೆ ನೀಡದೆ, ಸರ್ಕಾರದ ನಿಯಮದಂತೆ ಕಾರ್ಯ ನಿರ್ವಹಿಸಬೇಕು. ಪಪಂ ಮುಖ್ಯಾಧಿಕಾರಿ ಕಾರ್ಯಾಲಯದಲ್ಲಿದ್ದರೆ ಮಾತ್ರ ಸಿಬ್ಬಂದಿ ಜವಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಆರೋಪವಿದೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಪಂ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರು.

ಪಟ್ಟಣದ ಅಭಿವೃದ್ಧಿಗೆ 2025-26ನೇ ಸಾಲಿನ ತೆರಿಗೆಯಲ್ಲಿ ಶೇ.3ರಷ್ಟು ಹೆಚ್ಚಿಗೆ ಮಾಡಲಾಗುವುದು, ಇದಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಬೇಕು ಎಂದರು. ಈ ವಿಷಯಕ್ಕೆ ಎಲ್ಲ ಸದಸ್ಯರು ಸಹಮತ ಸೂಚಿಸಿದರು.

ಪಪಂ ಅಧ್ಯಕ್ಷ ರಾಮಚಂದ್ರ ಬೋರ್ಜಿ ಮಾತನಾಡಿ, ಬೇಸಿಗೆ ಪ್ರಾರಂಭವಾಗಿದೆ. ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ವಾರ್ಡ ಸ್ವಚ್ಛತೆಗೆ ಅಧಿಕಾರಿಗಳು ನಿಗಾವಹಿಸಬೇಕು ಎಂದರು.

ಪಪಂ ಸದಸ್ಯ ಸಂತೋಷ ನಿಂಬಾಳ್ಕರ ಮಾತನಾಡಿದರು. ಉಪಾಧ್ಯಕ್ಷೆ ಕಲಾವತಿ ಗಡ್ಡದ, ಸದಸ್ಯರಾದ ಅಜ್ಜುಬಾಯಿ ಸರ್ಕಾರ, ಸಿದ್ದಲಿಂಗ ನಾಗರಾಳ, ರಾಜು ಬೋರ್ಜಿ, ಕಾಮೇಶ ಧಂದರಗಿ, ಹುಚ್ಚಪ್ಪ ಕೌಲಗಿ, ಮುತ್ತವ್ವ ಗಾಣಗೇರ, ಯಾಶ್ವಿನಿ ಬಾಗವಾನ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net