ತೇಜೂರಿನಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ

2ark4
ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದ ತೇಜೂರು ಗ್ರಾಮಕ್ಕೆ ತಹಸೀಲ್ದಾರ್ ಬಸವ ರೆಡ್ಡಪ್ಪ ರೋಣದ ಭೇಟಿ ನೀಡಿ ಪರಿಶೀಲಿಸಿದರು. ಅಶೋಕ್, ನವೀನ್ ಕುಮಾರ್, ಡಾ.ಶಿವರಾಂ ಇದ್ದರು.
Published on

ಅರಕಲಗೂಡು: ತಾಲೂಕಿನ ತೇಜೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ತುರ್ತಾಗಿ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ್ ತಿಳಿಸಿದರು.


ಗ್ರಾಮದಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಾಗಿದೆ. ನೀರಿಲ್ಲದೆ ಜಾನುವಾರುಗಳು ಸಾಯುತ್ತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಗ್ರಾಪಂನಿಂದ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿರುವ ಕಾರಣ ಅಗತ್ಯ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಪರಿಶೀಲಿಸಿ, ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಮನೆ, ಮನೆಗೆ ನೀರು ಸರಿಯಾಗಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ವಾಲ್‌ಗಳನ್ನು ಅಳವಡಿಸಿ ಸರದಿಯಂತೆ ಎಲ್ಲರಿಗೂ ನೀರು ಕೊಡುವಂತೆ ಪಿಡಿಒಗೆ ಸೂಚಿಸಿರುವುದಾಗಿ ಹೇಳಿದರು.


ನೀರಿನ ಸಮಸ್ಯೆಯಿಂದ ಜಾನುವಾರು ಮೃತಪಟ್ಟಿಲ್ಲ, ಚಪ್ಪೆರೋಗದಿಂದ ಮೃತಪಟ್ಟಿದೆ ಎಂದು ಮುಖ್ಯ ಪಶುವೈದ್ಯಾಧಿಕಾರಿ ತಿಳಿಸಿದ್ದಾರೆ. ಜಲಜೀವನ್ ಮಿಷನ್ ಕುಡಿಯುವ ನೀರು ಸರಬರಾಜಿಗೆ ಕೊರೆಸಿದ್ದ ಕೊಳವೆ ಬಾವಿಯಲ್ಲಿ ನೀರು ಬಾರದೆ ವಿಫಲವಾಗಿದೆ. ಭೂಗರ್ಭಶಾಸ್ತ್ರಜ್ಞರನ್ನು ಸಂಪರ್ಕಿಸಿದ್ದು ಸೋಮವಾರ ಬರುವುದಾಗಿ ಹೇಳಿದ್ದಾರೆ. ನಾಲ್ಕು ಪಾಯಿಂಟ್‌ಗಳನ್ನು ಗುರುತಿಸಲು ಸೂಚಿಸಿದ್ದು, ಉತ್ತಮವಾಗಿ ನೀರು ದೊರಕುವ ಕಡೆ ಕೊಳವೆ ಬಾವಿ ಕೊರೆಸುವುದಾಗಿ ಹೇಳಿದರು.


ಇಒ ಡಾ ಆಶೋಕ್ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನಿಗಾ ವಹಿಸಲಾಗಿದೆ. ಸಮಸ್ಯೆ ಇರುವ ಕಡೆ ಖಾಸಗಿ ಕೊಳವೆಬಾವಿಗಳನ್ನು ವಶಕ್ಕೆ ಪಡೆದು ನೀರು ಸರಬರಾಜು ಮಾಡಲಾಗುವುದು. ಅಗತ್ಯ ಬಿದ್ದಲ್ಲಿ ಟ್ಯಾಂಕರ್ ಮೂಲಕ ಪೂರೈಸುವುದಾಗಿ ಹೇಳಿದರು.
ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾದ ಸ್ಥಳಗಳನ್ನು ಗುರುತಿಸಿ ನೀರು ಸರಬರಾಜಿನ ಕೊಳವೆ ಬಾವಿಗಳನ್ನು ಇನ್ನಷ್ಟು ಆಳಕ್ಕೆ ಕೊರೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಭೂಗರ್ಭಶಾಸ್ತ್ರಜ್ಞರು ಹಾಗೂ ಬಾವಿ ಕೊರೆಯುವ ಯಂತ್ರಗಳ ಸಮಸ್ಯೆ ಎದುರಾಗಿದೆ. ಬಗ್ಗೆ ಗಮನಹರಿಸಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಲ್ಲ ಕ್ರಮ ವಹಿಸಲಾಗುವುದು ಎಂದರು.


ಗ್ರಾಮಸ್ಥರು ಹಾಗೂ ಮಹಿಳೆಯರು ಗ್ರಾಮದಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ವಿವರಿಸಿ ಸಮರ್ಪಕ ನೀರು ಸರಬರಾಜು ಮಾಡುಲು ಶೀಘ್ರವಾಗಿ ಕ್ರಮ ಕೈಗೊಳ್ಳುಳುವಂತೆ ಮನವಿ ಮಾಡಿದರು. ಜೆಜೆಎಂ ಇಂಜಿನಿಯರ್ ನವೀನ್ ಕುಮಾರ್, ಸೆಸ್ಕ್ ಎಇಇ ಶ್ರೀನಿವಾಸಲು, ಎಇ ಚಿದಂಬರ್, ಪಿಡಿಒ ಗೋವಿಂದಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net