

ರಾಯಚೂರು: ರಾಜ್ಯದಲ್ಲಿ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಭರವಸೆ ನೀಡಿದರು.
ಸ್ಥಳೀಯ ಸೀತಾ ಸುಬ್ಬರಾಜು ಪದವಿ ಕಾಲೇಜು ಆವರಣದಲ್ಲಿ ಟ್ಯಾಗೋರ ಶಿಕ್ಷಣ ಸಂಸ್ಥೆಯಿಂದ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಭಾಗದ ಶೈಕ್ಷಣಿಕ ಪ್ರಗತಿಗಾಗಿ ಕೆಲಸ ಮಾಡುತ್ತಿವೆ ಎಂದರು.
ಈ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು, ಶೀಘ್ರದಲ್ಲಿ ಶಿಕ್ಷಣ ನೇಮಕಾತಿ ಮಾಡುವ ಕೆಲಸ ಮಾಡಲಾಗುವುದು. ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ, ಪೌಷ್ಠಿಕ ಆಹಾರ, ಬಾಳೆಹಣ್ಣು, ಮೊಟ್ಟೆ ವಿತರಣೆ ಸೇರಿದಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
371ಜೆ ಅಡಿ ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ನೀಡಿದ ನಂತರ ಶಿಕ್ಷಣ, ಉದ್ಯೋಗದಲ್ಲಿ ಈ ಭಾಗದವರಿಗೆ ಹೆಚ್ಚಿನ ಆದಯ್ತೆ ದೊರೆಯುತ್ತಿದೆ. ಹಲವಾರು ಲೋಪದೋಷಗಳಿದ್ದು, ಅದನ್ನು ಸರಿಪಡಿಸುವ ಉದ್ದೇಶದಿಂದ ಸಮಿತಿ ರಚನೆ ಮಾಡಲಾಗಿದೆ. ಜತೆಗೆ ಕೆಕೆಆರ್‌ಡಿಬಿಯಿಂದ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗುತ್ತಿದೆ.
ಕೇವಲ 100 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಟಾಗೋರ್ ಶಿಕ್ಷಣ ಸಂಸ್ಥೆ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದು, ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಂಸ್ಥೆಯ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಸಂಸ್ಥೆಯ ಎಲ್ಲ ಕೆಲಸಗಳಿಗೆ ಸಹಕಾರ ನೀಡುವುದಾಗಿ ಎನ್.ಎಸ್.ಬೋಸರಾಜು ತಿಳಿಸಿದರು.
ಟಾಗೋರ ಶಿಕ್ಷಣ ಸಂಸ್ಥೆ ಮಾಜಿ ಕಾರ್ಯದರ್ಶಿ ಎಸ್.ಬಿ.ಪಾಟೀಲ್ ಮಾತನಾಡಿ, ಸಂಸ್ಥೆ ಆರಂಭದಿಂದಲೂ ಬೆಳವಣಿಗೆಗೆ ಎನ್.ಎಸ್.ಬೋಸರಾಜು ಸಹಕಾರ ನೀಡುತ್ತಾ ಬಂದಿದ್ದಾರೆ. ದೇಶಕ್ಕೆ ಅನ್ನ ನೀಡುವ ರೈತ, ದೇಶವನ್ನು ರಕ್ಷಿಸುವ ಯೋಧ, ಮಾರ್ಗದರ್ಶನ ನೀಡುವ ಶಿಕ್ಷಕರನ್ನು ನಾವು ಸದಾ ನೆನಪಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ ಆರ್.ಕೆ.ಅಮರೇಶ ಮಾತನಾಡಿ, ಬೋಸರಾಜರಂತಹ ಸರಳ, ಪ್ರಾಮಾಣಿಕ ಮತ್ತು ವೌಲ್ಯಾಧರಿತ ರಾಜಕಾರಣಿ ಸಿಗುವುದು ವಿರಳ. ಪದವಿ ಕಾಲೇಜು ಆರಂಭಕ್ಕೆ ತಮ್ಮ ತಾಯಿ ಹೆಸರಿನಲ್ಲಿ 5 ಎಕರೆ ಜಮೀನು ನೀಡುವುದರ ಜತೆಗೆ ಎಂಎಲ್ಸಿಯಾಗಿದ್ದಾಗ 10 ಲಕ್ಷ ಅನುದಾನ ನೀಡುವ ಮೂಲಕ ಸಂಸ್ಥೆ ಅಭಿವೃದ್ಧಿಗೆ ಸಹಕರಿಸಿದ್ದಾರೆ ಎಂದು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಸವರಾಜ ಪಾಟೀಲ್ ದರೂರು, ಪದಾಕಾರಿಗಳಾದ ಜಗದೀಶ ಗುಪ್ತ, ಕೆ.ಶಾಂತಪ್ಪ, ಲಕ್ಷ್ಮಿಕಾಂತ ರೆಡ್ಡಿ, ಎಸ್‌ಎಸ್‌ಎಂ ಕಾಲೇಜು ಪ್ರಾಚಾರ್ಯ ಡಾ.ಶ್ರೀನಿವಾಸ ರಾಯಚೂರಕರ್ ಹಾಗೂ ಸಂಸ್ಥೆಯ ವಿವಿಧ ಶಾಲೆ, ಕಾಲೇಜುಗಳ ಉಪನ್ಯಾಸಕರು, ಶಿಕ್ಷಕರು ಉಪಸ್ಥಿತರಿದ್ದರು.