

ಶ್ರೀರಂಗಪಟ್ಟಣ: ಕ್ಷೇತ್ರದ ಗ್ರಾಮೀಣ ಭಾಗದ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಜನಸಂಪರ್ಕ ಸಭೆ ನಡೆಸುತ್ತಿದ್ದು, ಜನರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.
ತಾಲೂಕಿನ ಅರಕರೆ ಹೋಬಳಿಯ ಬಳ್ಳೆಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಜನರ ಸಮಸ್ಯೆ ಆಲಿಸಿದ ಶಾಸಕರು, ಫಲಾನುಭವಿಗಳಿಗೆ ಇ-ಸ್ವತ್ತು ಹಾಗೂ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ಆಗಬೇಕಿರುವ ಜನರ ಕೆಲಸಗಳನ್ನು ನಿಗದಿತ ಸಮಯದಲ್ಲಿ ಸಂಪೂರ್ಣವಾಗಿ ಮುಗಿಸಿಕೊಡಬೇಕು. ಈ ನಿಟ್ಟಿನಲ್ಲಿ ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಂಟಿ ಸಹಯೋಗದಲ್ಲಿ ವೇಳಾಪಟ್ಟಿ ಮಾಡಿಕೊಳ್ಳಲಾಗಿದೆ. ಪೌತಿ ಖಾತೆ, ಇ-ಸ್ವತ್ತು, ಕಂದಾಯ ಇಲಾಖೆಗಳಲ್ಲಿನ ಕೆಲಸಗಳು, ವಿವಿಧ ಫಲಾನುಭವಿಗಳ ವೇತನಗಳಲ್ಲಿನ ಸಮಸ್ಯೆ, ವಿದ್ಯುತ್ ಸಮಸ್ಯೆಗಳನ್ನು ಸ್ಥಳದಲ್ಲೇ ಅಧಿಕಾರಿಗಳ ಮೂಲಕ ನಿವಾರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಲಭ್ಯವಿರುವ ಸರ್ಕಾರಿ ಜಮೀನುಗಳನ್ನು ಗ್ರಾಮಸ್ಥರೇ ಗುರುತಿಸಿದ್ದಲ್ಲಿ ಸಂಬಂಧಪಟ್ಟ ಇಲಾಖೆ ಮೂಲಕ ವಸತಿ ರಹಿತ ಬಡಜನರಿಗೆ ನಿವೇಶನ ಕೊಡಿಸುವ ಹಾಗೂ ವಸತಿ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಬಳ್ಳೆಕೆರೆ ಗ್ರಾಮದಲ್ಲಿ ಅಭಿವೃದ್ಧಿ ಆಗಬೇಕಿರುವ ಚಾಮಲಾಪುರ ರಸ್ತೆ, ಅರ್ಧಕ್ಕೆ ನಿಂತಿರುವ ನೇರಲೆಕೆರೆ ಸಂಪರ್ಕ ರಸ್ತೆ, ಬಳ್ಳೆಕೆರೆ ಗ್ರಾಮದ ಚರಂಡಿ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ, ವಿದ್ಯುತ್ ಕಂಬಗಳ ಸಂಪರ್ಕ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
2 ವರ್ಷಗಳಿಂದ ಯಾವ ಪೌರಕಾರ್ಮಿಕರು ಕಾರ್ಯ ನಿರ್ವಹಿಸದ ಕಾರಣ ಗ್ರಾಮದಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಗ್ರಾಮದ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲವಾಗಿದ್ದು, ನೂತನ ಕಟ್ಟಡ ನಿರ್ಮಾಣವಾಗಬೇಕಿದೆ ಎಂದು ಬಳ್ಳೇಕೆರೆ ಗ್ರಾಮಸ್ಥರು ಒಕ್ಕೊರಲಿನಿಂದ ಮನವಿ ಮಾಡಿದರು.
ಸಶ್ಮಾನಕ್ಕೆ ಜಾಗ ನೀಡುವಂತೆ ಗೆಂಡೆಹೊಸಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಜನರು ಒತ್ತಾಯಿಸಿದರಲ್ಲದೆ, ಗೆಂಡೆಹೊಸಹಳ್ಳಿ ಗ್ರಾಮದ ಶ್ರೀರಂಗಪಟ್ಟಣ-ಬನ್ನೂರು ರಸ್ತೆಯ ನಾಲಾ ತಿರುವಿನಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತಿದ್ದು, ಈ ಬಗ್ಗೆ ಕ್ರಮ ವಹಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಬಿಇಒ ಅನಂತರಾಜು, ತೋಟಗಾರಿಕೆ ಸಹಾಯಕ ನಿರ್ದೇಶಕಿ ಗಾಯತ್ರಿ, ಎಡಿಎಲ್‌ಆರ್ ಮೇಘನಾ, ಸಿಡಿಪಿಒ ರಜಿನಿ, ಸಮಾಜ ಕಲ್ಯಾಣಾಧಿಕಾರಿ ಮೇಘನಾ, ಜಿಪಂ ಎಇಇ ರಾಮಕೃಷ್ಣೇಗೌಡ, ಸೆಸ್ಕ್ ಎಇ ಮಂಜುನಾಥ್, ಪೊಲೀಸ್ ಅಧಿಕಾರಿಗಳು ಇದ್ದರು.
ಅರಕೆರೆ ಹೋಬಳಿ ವ್ಯಾಪ್ತಿಯ ಕೊಡಿಯಾಲ ಹಾಗೂ ಮುಂಡುಗದೊರೆ ಗ್ರಾಮ ಪಂಚಾಯಿತಿಗಳಲ್ಲೂ ಆಯೋಜಿಸಿದ್ದ ಸಭೆಯಲ್ಲಿ ಜನರ ಸಮಸ್ಯೆ ಆಲಿಸಲಾಯಿತು.