ಕಾಲಮಿತಿಯಲ್ಲಿ ಜನರ ಸಮಸ್ಯೆ ಇತ್ಯರ್ಥಕ್ಕೆ ಕ್ರಮ

ARASIKERE
ಅರಸೀಕೆರೆ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆ ಯಲ್ಲಿ ಸತ್ಯಭಾಮಾ ಮಾತನಾಡಿದರು. ಕೆ.ಎಂ.ಶಿವಲಿಂಗೇ ಗೌಡ, ಕೃಷ್ಣಮೂರ್ತಿ ಇದ್ದರು.
Published on

ಅರಸೀಕೆರೆ: ಸಾರ್ವಜನಿಕರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ಪ್ರಯತ್ನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಸತ್ಯಭಾಮಾ ಹೇಳಿದರು.

ನಗರಸಭೆ ಕಚೇರಿ ಸಭಾಂಗಣದಲ್ಲಿ ಬುಧವಾರ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿ, ಖಾತೆ ಬದಲಾವಣೆ, ಇ ಸ್ವತ್ತು ವಿಳಂಬ ಸೇರಿದಂತೆ ಅನೇಕ ಸಮಸ್ಯೆಗಳು ಗಮನಕ್ಕೆ ಬಂದಿದ್ದು, ಯಾವ ಕಾರಣಕ್ಕೆ ತೊಂದರೆ ಎದುರಾಗಿದೆ ಎಂಬುದನ್ನು ತಿಳಿದು ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.

ನಿಕಟಪೂರ್ವ ಅಧ್ಯಕ್ಷ ಸಿ.ಗಿರೀಶ್, ಸದಸ್ಯರಾದ ಭಾಸ್ಕರ, ಮೇಲುಗಿರಿಗೌಡ ಇತರರು ಮಾತನಾಡಿ, ಹದಿನೈದನೇ ಹಣಕಾಸು ಯೋಜನೆಯಲ್ಲಿ ಏಳು ವಾರ್ಡ್‌ಗಳಿಗೆ ತಾರತಮ್ಯ ಮಾಡಲಾಗಿದೆ. ಎಸ್‌ಎಫ್‌ಸಿ ಯೋಜನೆ ಹಣ ಕೂಡ ಕೆಲವರ ಅಣತಿಯಂತೆ ಹಂಚಿಕೆಯಾಗಿದ್ದು ಲೋಪ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಸದಸ್ಯರು ಅಹವಾಲು ಹೇಳುತ್ತಿದ್ದಂತೆ ಮೈಕ್ ಹಿಡಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ಈಗಾಗಲೇ ಕ್ರಿಯಾಯೋಜನೆ ಸಿದ್ಧಪಡಿಸಿದ್ದು ಮುಂದೆ ಸರಿಪಡಿಸೋಣ ಎಂದು ಸಮಜಾಯಿಷಿ ನೀಡಿದರು. ಇದರಿಂದ ಕೆರಳಿದ ಸದಸ್ಯರು ಎಲ್ಲದಕ್ಕೂ ನೀವೇ ಉತ್ತರ ಹೇಳಿದರೆ ಡಿಸಿ ಮೇಡಂ ಏಕೆ ಬರಬೇಕಿತ್ತು ಎಂದು ತಿರುಗೇಟು ನೀಡಿದ್ದರಿಂದ ಕೆಲ ಕಾಲ ಗೊಂದಲ ನಿರ್ಮಾಣವಾಗಿತ್ತು. ತಕ್ಷಣವೇ ಮಧ್ಯೆ ಪ್ರವೇಶಿಸಿದ ಸತ್ಯಭಾಮಾ ಪರಿಸ್ಥಿತಿ ತಿಳಿಗೊಳಿಸಿದರು.

ಪೌರಾಯುಕ್ತ ಕೃಷ್ಣಮೂರ್ತಿ, ಮುಖಂಡರಾದ ರಮೇಶ್, ಶಿವನ್‌ರಾಜ್, ಮಲ್ಲಿಕಾರ್ಜುನ, ಹರೀಶ್, ಸದಸ್ಯ ರಾಜಶೇಖರ ಸೇರಿದಂತೆ ಹಲವರು ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net