ಮಾಂಬಳ್ಳಿ ಗ್ರಾಮದ ಸಮಸ್ಯೆ ಬಗೆಹರಿಸಲು ಕ್ರಮ

16 yelandur 01
ಯಳಂದೂರು ತಾಲೂಕಿನ ಮಾಂಬಳ್ಳಿಗೆ ಭೇಟಿ ನೀಡಿದ ತಾಪಂ ಇಒ ಉಮೇಶ್ ಗ್ರಾಮದ ವಾರ್ಡ್‌ಗಳಿಗೆ ಸಂಚರಿಸಿ ಇಲ್ಲಿನ ಪರಿಸ್ಥಿತಿ ಅವಲೋಕಿಸಿದರು. ಗ್ರಾಪಂ ಅಧ್ಯಕ್ಷ ಆರ್. ಮಲ್ಲೇಶ್ ಸೇರಿದಂತೆ ಇತರರು ಇದ್ದರು.
Published on

ಯಳಂದೂರು: ಮೂರು ದಿನಗಳಿಂದ ತಾಲೂಕಿನ ಮಾಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮದ ಸಮಸ್ಯೆ ಬಗೆಹರಿಸುವಲ್ಲಿ ಇಲ್ಲಿನ ಪಿಡಿಒ ಉಷಾರಾಣಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಗ್ರಾಪಂ ಸದಸ್ಯರು ನಡೆಸುತ್ತಿರುವ ಹೋರಾಟ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿನ ಪಂಚಾಯಿತಿ ಕಚೇರಿಗೆ ತಾಪಂ ಇಒ ಉಮೇಶ್ ಭೇಟಿ ನೀಡಿ, ಸದಸ್ಯರು, ಪಿಡಿಒ ಜತೆ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿ, ಗ್ರಾಮದಲ್ಲಿ ದೀಪಾವಳಿ ಜಾತ್ರೆ ಅ.22 ರಿಂದ ಆರಂಭವಾಗಲಿದೆ. ಆದರೂ ಕೂಡ ಇಲ್ಲಿ ಸ್ವಚ್ಛತೆ ಇಲ್ಲ, ಕಸ ವಿಲೇವಾರಿಯಾಗಿಲ್ಲ, ಬೀದಿ ದೀಪ ಕೆಟ್ಟು ನಿಂತಿದೆ, ರಸ್ತೆಯ ತುಂಬೆಲ್ಲ ಅನೈರ್ಮಲ್ಯ ಇದೆ, ರಸ್ತೆಗಳು ಗುಂಡಿ ಬಿದ್ದಿವೆ. ಇದನ್ನು ಸರಿಪಡಿಸಲು ಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಧ್ಯಕ್ಷರೂ ಸೇರಿದಂತೆ ಸದಸ್ಯರು ಹಾಗೂ ಕೆಲ ಗ್ರಾಮಸ್ಥರು ದೂರು ನೀಡಿದ್ದರು. ಅಲ್ಲದೆ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ನಾನು ಕಚೇರಿಗೆ ಭೇಟಿ ನೀಡಿ ಗ್ರಾಮ ಸಂಚಾರ ನಡೆಸಿದ್ದೇನೆ. ಇಲ್ಲಿ ಸಮಸ್ಯೆ ಹೆಚ್ಚಾಗಿವೆ. ನಾಳೆಯಿಂದಲೇ ಕಸ ವಿಲೇವಾರಿ ಸೇರಿದಂತೆ ಇರತೆ ಸಮಸ್ಯೆ ನಿವಾರಣೆಗೆ ಪಂಚಾಯತ್ ರಾಜ್ ಇಲಾಖೆಯ ಎಇಇ ಚಂದ್ರಶೇಖರಮೂರ್ತಿ ಅವರಿಗೆ ಅಂದಾಜು ಪಟ್ಟಿ ತಯಾರಿಸಲು ಸೂಚನೆ ನೀಡಿದ್ದೇನೆ. ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಸದಸ್ಯರು ಅನೇಕ ಆರೋಪ ಮಾಡಿದ್ದಾರೆ. ಇವರ ವಿರುದ್ಧ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಹಬ್ಬದ ಬಳಿಕ ಇಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ತನಿಖೆ ನಡೆಸಿ ಕ್ರಮ ವಹಿಸಲಾಗುವುದು ಎಂದು ಮಾಹಿತಿ ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷ ಆರ್. ಮಲ್ಲೇಶ್ ಮಾತನಾಡಿ, ನಮ್ಮ ಪಂಚಾಯಿತಿಯಲ್ಲಿ 15ನೇ ಹಣಕಾಸಿನಲ್ಲಿ ಯಾವುದೇ ಕೆಲಸ ನಡೆದಿಲ್ಲ. ವಿಕಲಚೇತನರ ಶೇ.5ರ ಅನುದಾನ ಬಳಕೆಯಾಗಿಲ್ಲ. ನರೇಗಾ ಕಾಮಗಾರಿ ದುರ್ಬಳಕೆಯಾಗಿದೆ. ಇತರ ಸರ್ಕಾರಿ ಅನುದಾನಗಳನ್ನು ಬಳಸಿಕೊಂಡಿಲ್ಲ. ಪಿಡಿಒ ಕೇವಲ ತಮ್ಮ ಲಾಭಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ತಮಗೆ ಆದಾಯ ಬರುವ ಇ-ಸ್ವತ್ತು ಸೇರಿದಂತೆ ಇತರ ಕೆಲಸವನ್ನು ಮಾಡುತ್ತಿದ್ದಾರೆ. ಕೇವಲ ಕಚೇರಿ ಕೆಲಸಗಳಿಗೆ ಸೀಮಿತವಾಗಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಅಭಿವೃದ್ಧಿಗೆ ಕ್ರಮ ವಹಿಸುತ್ತಿಲ್ಲ. ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಪೌರಕಾರ್ಮಿಕರಿಗೆ ಸಂಬಳ ನೀಡಿಲ್ಲ. ಪಂಚಾಯಿತಿಯಲ್ಲಿ ಅನೇಕ ಅಕ್ರಮಗಳನ್ನು ಇವರು ಮಾಡಿದ್ದಾರೆ. ಇವರ ವಿರುದ್ಧ ಈಗಾಗಲೇ ಇಒ, ಸಿಎಸ್ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಇದನ್ನೇ ಮುಂದುವರಿಸಿದ್ದಲ್ಲಿ ಇವರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಒ ಜತೆ ಗ್ರಾಮದ ಕೆಲ ಬಡಾವಣೆಗಳ ಸ್ಥಿತಿಗತಿಗಳನ್ನು ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಮುಬಾರಕ್‌ಉನ್ನೀಸಾ ಸದಸ್ಯರಾದ ಲಕ್ಷ್ಮೀಪತಿ, ದರ್ಶನ್‌ಕುಮಾರ್, ಇಂದ್ರಮ್ಮ, ಎಸ್. ರಾಜೇಶ್ವರಿ ರಾಜಪ್ಪ, ಶೋಭಾಲಕ್ಷ್ಮೀ, ಜ್ಯೋತಿ, ಲಕ್ಷ್ಮೀರಾಮು, ರತ್ನಮ್ಮ, ಮುತ್ತುರಾಜು ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net