

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಉಡುಪಿ ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ನಮೂನೆ 50, 53ರಲ್ಲಿ ಸ್ವೀಕೃತವಾಗಿರುವ ಅರ್ಜಿಗಳಲ್ಲಿ 24,470 ಅರ್ಜಿಗಳನ್ನು ಸಕ್ರಮಗೊಳಿಸಲಾಗಿದೆ. ಬಾಕಿಯಿರುವ ಅರ್ಜಿಗಳಲ್ಲಿ ಅರ್ಹ ಅರ್ಜಿಗಳನ್ನು ಸಮಿತಿಯಲ್ಲಿ ಮಂಡಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಉತ್ತರಿಸಿದ್ದಾರೆ.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಬೆಳಗಾವಿ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಕಾಪು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಸಕ್ತ ವರ್ಷ ನಮೂನೆ 53ರಲ್ಲಿ ಹಾಗೂ ನಮೂನೆ 57ರಲ್ಲಿ ಕಾಪು ಹಾಗೂ ಉಡುಪಿ ತಾಲೂಕಿನಲ್ಲಿ ಸ್ವೀಕೃತವಾಗಿದ್ದ 2705 ಅರ್ಜಿಗಳ ಪೈಕಿ 269 ಅರ್ಜಿ ವಿಲೇ ಮಾಡಲಾಗಿದೆ. ಬಗರ್ ಹುಕುಂ ಕಮಿಟಿಯಲ್ಲಿ ಕಡತ ಇತ್ಯರ್ಥಗೊಳಿಸಲು ಯಾವುದೇ ತಾಂತ್ರಿಕ ತೊಡಕುಗಳಿಲ್ಲ ಎಂದು ವಿವರಿಸಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಪ್ರಸ್ತುತ ಪ್ಲಾಟಿಂಗ್(ಪೋಡಿ ದುರಸ್ತಿ)ಗೆ ಉಡುಪಿ ತಾಲೂಕಿನ 175 ಮತ್ತು ಕಾಪು ತಾಲೂಕಿನ 75 ಸೇರಿ 250 ಪ್ರಕರಣ ಮೋಜಣಿ ತಂತ್ರಾಂಶದಲ್ಲಿ ಬಾಕಿ ಇವೆ. ಇವುಗಳಲ್ಲಿ 82 ಪ್ರಕರಣಗಳಲ್ಲಿ ನಮೂನೆ 1ರಿಂದ 5 ಭರ್ತಿ ಮಾಡಲು ಕಂದಾಯ ಇಲಾಖೆಯಲ್ಲಿ ಮತ್ತು 44 ಪ್ರಕರಣಗಳಲ್ಲಿ ಮಂಜೂರಿ ನಡಾವಳಿ, ಸಾಗುವಳಿ ಈ ಮಂಜೂರಿ ನಕ್ಷೆ ಇತ್ಯಾದಿ ಮೂಲ ಮಂಜೂರಿ ದಾಖಲೆಗಳಿಲ್ಲದ ಕಾರಣ ದಾಖಲೆಗಳ ಸಂಗ್ರಹಣೆ ಹಾಗೂ ಗೈರು ವಿಲೇ ಕಡತ ಪುನಃ ನಿರ್ಮಾಣ ಸಮಿತಿಗೆ ಮಂಡಿಸಲು ಬಾಕಿ ಇರುತ್ತವೆ. ಉಳಿದಂತೆ 124 ಪ್ರಕರಣ ಅಳತೆಗೆ ಅರ್ಹ ಪ್ರಕರಣಗಳಾಗಿದ್ದು, ಅಳತೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.
ಬಸ್ಗಳ ಖರೀದಿ, ವಾಹನ ಮತ್ತು ಚಾಲನಾ ಸಿಬ್ಬಂದಿ ಲಭ್ಯತೆಗನುಗುಣವಾಗಿ ಹಂತ ಹಂತವಾಗಿ ಮೂಲ ಸೌಕರ್ಯ ಕ್ರೋಡೀಕರಿಸಿ ಮಾರ್ಗ ಸಮೀಕ್ಷೆ ಕೈಗೊಂಡು ಹೆಚ್ಚುವರಿ ಕಾಪು ಕ್ಷೇತ್ರ ವ್ಯಾಪ್ತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಉತ್ತರಿಸಿದ್ದಾರೆ. ಕಾಪು ಕ್ಷೇತ್ರ ವ್ಯಾಪ್ತಿಯ ಮೂಡುಬೆಳ್ಳೆ ನೆಲ್ಲಿಕಟ್ಟೆ ಮಾರ್ಗದಲ್ಲಿ ನರ್ಮ್ ಬಸ್ ಸಂಚಾರ ಸ್ಥಗಿತದಿಂದ ಜನ ಓಡಾಟಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಗುರ್ಮೆ ಪ್ರಶ್ನೆಗೆ ಉತ್ತರಿಸಿರುವ ಸಚಿವರು, 2023-24ರ ಪೂರ್ವದ ವರ್ಷಗಳಲ್ಲಿ ಸಾರಿಗೆ ಸಿಬ್ಬಂದಿ ನೇಮಕವಾಗಿರಲಿಲ್ಲ ಹಾಗೂ ಹೊಸ ವಾಹನ ಖರೀದಿಸಿರಲಿಲ್ಲ. ಪ್ರಸ್ತುತ ಬಸ್ಗಳ ಖರೀದಿ ಹಾಗೂ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದಿದ್ದಾರೆ.
ಕಾಪು ಕ್ಷೇತ್ರದ ಕಡಲ್ಕೊರೆತ ಪ್ರದೇಶಗಳಲ್ಲಿ ಶಾಶ್ವತ ತಡೆಗೋಡೆ ರಚನೆಗೆ 2024-25ನೇ ಸಾಲಿನಲ್ಲಿ 238.76 ಲಕ್ಷ ರೂ. ಅನುದಾನ ಮೀಸಲಿಟ್ಟಿರುವುದಾಗಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಲ್ಕೊರೆತ ಬಾಧಿತ ಪ್ರದೇಶಗಳಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ ಕೈಗೊಳ್ಳಲು ಕರ್ನಾಟಕ ಜಲಸಾರಿಗೆ ಮಂಡಳಿ 3 ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಿದ್ದು, ಅವುಗಳಲ್ಲಿ ಪಡುಬಿದ್ರಿ ಬೀಚ್ ನಡಿಪಟ್ಟ ಹತ್ತಿರದ ಕಡಲ ತೀರದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಜಲಸಾರಿಗೆ ಮಂಡಳಿ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.