

ಮಡಿಕೇರಿ:
ಬಿಜೆಪಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಸಹಜವಾಗಿ ಟಿಕೆಟ್ ವಂಚಿತರು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ. ಅಸಮಾಧಾನ ಹೋಗಲಾಡಿಸಲು ಈಗಾಗಲೇ ನಮ್ಮ ನಾಯಕರು ಮುಂದಾಗಿದ್ದಾರೆ ಎಂದು ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ತಿಳಿಸಿದರು. ಈಶ್ವರಪ್ಪ ಅವರಿಗೆ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನ ಇದೆ. ಅವರು ಕೂಡ ತಮ್ಮ ವೇದನೆ ಹೇಳಿಕೊಂಡಿದ್ದಾರೆ. ಅದನ್ನೂ ನಮ್ಮ ನಾಯರು ಸರಿಪಡಿಸುತ್ತಾರೆ ಎಂದು ಗುರುವಾರ ಮಡಿಕೇರಿಯಲ್ಲಿ ಹೇಳಿದರು.
ನಳಿನ್ ಕುಮಾರ್ ಕಟೀಲ್ ಮತ್ತು ಪ್ರತಾಪ್ ಸಿಂಹ ಹೇಳಿಕೆ ನಮಗೆ ಖುಷಿ ಕೊಟ್ಟಿದೆ.
ಮೂರನೇ ಬಾರಿಗೆ ಕಮಲ ಅರಳಬೇಕು, ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಗುರಿ ನಮ್ಮದು.
ಬಿಜೆಪಿಯಲ್ಲಿ ಒಕ್ಕಲಿಗರಿಗೆ ಸ್ಥಾನ ಇಲ್ಲ ಎಂದು ಕೆಲವರು ಆರೋಪ ಮಾಡುತ್ತಾರೆ. ಆದರೆ ಅದು ಸುಳ್ಳು. ಬಿಜೆಪಿ ಬಗ್ಗೆ ಆರೋಪ ಮಾಡುವ ದೊಡ್ಡದೊಂದು ಫ್ಯಾಕ್ಟರಿಯೇ ಇದೆ. ಅದರ ಕೆಲಸ ಕೇವಲ ಹುಸಿ ಆರೋಪಗಳನ್ನು ಮಾಡುವುದಾಗಿದೆ ಎಂದರು.
28 ಕ್ಷೇತ್ರಗಳ ಪೈಕಿ 25 ಕ್ಷೇತ್ರದಲ್ಲಿ ಬಿಜೆಪಿ ನಿಲ್ಲಬೇಕು ಎಂದು ಹೊಂದಾಣಿಕೆಯಾಗಿದೆ.
ಅದರಲ್ಲಿ 20 ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿದೆ. ಆಕಾಂಕ್ಷಿಗಳ ಸಂಖ್ಯೆ ಬಿಜೆಪಿಯಲ್ಲಿ ಸಹಜವಾಗಿ ಜಾಸ್ತಿ ಇದೆ. ಟಿಕೆಟ್ ಸಿಕ್ಕಿಲ್ಲ ಎಂದು ನೋವು ತೋಡಿಕೊಳ್ಳುವುದು ಸಹಜ. ಅದನ್ನ ಸರಿಪಡಿಸುವ ಕೆಲಸಕ್ಕೆ ನಮ್ಮ ನಾಯಕರು ಮುಂದಾಗಿದ್ದಾರೆ ಎಂದು ಹೇಳಿದರು.