

ಮೈಸೂರು: ಕೋವಿಡ್ ವೈದ್ಯಕೀಯ ಚಿಕಿತ್ಸೆಗೆ ಸರ್ಕಾರ ನಿಗದಿ ಪಡಿಸಿರುವ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳಿಂದ ರೋಗಿಗಳಿಗೆ ಮರುಪಾವತಿಗೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.
ಸ್ವಯಂಪ್ರೇರಣೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸೋಂಕಿತರಿಂದ ನಿತ್ಯ ಸಾಮಾನ್ಯವಾರ್ಡ್‌ಗೆ 10 ಸಾವಿರ ರೂ., ಆಕ್ಸಿಜನ್ ಹಾಸಿಗೆಗೆ 12 ಸಾವಿರ ರೂ. ಮತ್ತು ಐಸಿಯು ಹಾಸಿಗೆಗೆ 25 ಸಾವಿರ ರೂ.ದರವನ್ನು ಸರ್ಕಾರ ನಿಗದಿ ಪಡಿಸಿದೆ. ಇದಕ್ಕಿಂತ ಹೆಚ್ಚು ಹಣವನ್ನು ಸಂಗ್ರಹಿಸುವಂತಿಲ್ಲ ಎಂದು ಶುಕ್ರವಾರ ಫೇಸ್‌ಬುಕ್ ಲೈವ್ ಮೂಲಕ ತಿಳಿಸಿದರು.
ಹೆಚ್ಚುವರಿ ಬಿಲ್ ವಸೂಲಿ ಮಾಡುವ ಖಾಸಗಿ ಆಸ್ಪತ್ರೆ ಕುರಿತು ಸಾರ್ವಜನಿಕರು ಮಾಹಿತಿ ನೀಡಿ. ಆ ಹೆಚ್ಚುವರಿ ಹಣವನ್ನು ಖಾಸಗಿ ಆಸ್ಪತ್ರೆಗಳಿಂದ ಕೊಡಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತವೇ ಮಾಡಲಿದೆ ಎಂದರು. ಈ ವಿಷಯವಾಗಿ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚನೆ ಮಾಡಿದ್ದು, ಇದು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಜಿಲ್ಲೆಯ 64 ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ. ಜತೆಗೆ ಲಭ್ಯ ಇರುವ ಹಾಸಿಗೆ ಸೌಲಭ್ಯದ ಕುರಿತು ಖಾಸಗಿ ಆಸ್ಪತ್ರೆಗಳಲ್ಲಿ ಫಲಕ ಹಾಕಿ ಮಾಹಿತಿ ಪ್ರಕಟಿಸಬೇಕು ಎಂದು ತಾಕೀತು ಮಾಡಿದರು.
ಸಾವಿನ ಪ್ರಮಾಣ ಇಳಿಕೆ: ಜಿಲ್ಲೆಯಲ್ಲಿ ಕಳೆದ 20-25 ದಿನಗಳಿಂದ ಕರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಸಾವಿನ ಪ್ರಮಾಣವೂ ಶೇ.2.5ರಿಂದ 1.5ಕ್ಕೆ ಇಳಿಕೆಯಾಗಿರುವುದು ಉತ್ತಮ ಬೆಳವಣಿಗೆ. ಕೋವಿಡ್ ಪರೀಕ್ಷಾ ಸಾಮರ್ಥ್ಯವನ್ನೂ ನಿತ್ಯ 2,000ದಿಂದ 4,000ಕ್ಕೆ ಹೆಚ್ಚಿಸಿ, ತ್ವರಿತಗತಿಯಲ್ಲಿ ಸೋಂಕು ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
24 ಗಂಟೆಯಲ್ಲೇ ರಿಸಲ್ಟ್:
ವಿಜಯದಶಮಿ ಬಳಿಕ ಆರ್‌ಟಿ-ಪಿಸಿಆರ್ ಕೋವಿಡ್ ಪರೀಕ್ಷಾ ಫಲಿತಾಂಶವನ್ನು 24ಗಂಟೆಯಲ್ಲೇ ಸಿಗುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಿಎಫ್‌ಟಿಆರ್‌ಐನಲ್ಲಿ ಇರುವ ಎರಡು ಆರ್‌ಟಿ-ಪಿಸಿಆರ್ ಪ್ರಯೋಗಾಲಯದಿಂದ ನಿತ್ಯ 1500 ಮಾದರಿಗಳ ಪರೀಕ್ಷೆ ಮಾಡಲಾಗುತ್ತಿದೆ. ಉಳಿದ ಮಾದರಿಗಳನ್ನು ಪರೀಕ್ಷೆಗೆ ಬೆಂಗಳೂರು ಸೇರಿದಂತೆ ಇನ್ನಿತರ ಕಡೆಗೆ ಕಳುಹಿಸಲಾಗುತ್ತಿದೆ. ಇದರಿಂದ ಫಲಿತಾಂಶ ಸಿಗಲು ಐದಾರು ದಿನಗಳು ತಡವಾಗುತ್ತಿದೆ. ಇದು ಒಳ್ಳೆಯದಲ್ಲ. ಹೀಗಾಗಿ, ಮೈಸೂರಿನಲ್ಲೇ ಮಾದರಿಗಳ ಪರೀಕ್ಷೆಯನ್ನು ಮಾಡಿ 24ಗಂಟೆಯಲ್ಲಿ ಫಲಿತಾಂಶ ಪಡೆಯಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.