ಇಬ್ಬರು ಲ್ಯಾಬ್ ಟೆಕ್ನಿಶಿಯನ್ ನೀಡಲು ಕ್ರಮ

27 bkl 1
Published on

ಭಟ್ಕಳ: ಜಿಲ್ಲಾ ವೈದ್ಯಾಧಿಕಾರಿಗಳ ಜತೆ ಚರ್ಚಿಸಿ ಕೂಡಲೇ ಇಬ್ಬರು ಲ್ಯಾಬ್ ಟೆಕ್ನಿಶಿಯನ್‌ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಬೆಳಗಾವಿ ವಿಭಾಗೀಯ ಸಹನಿರ್ದೇಶಕಿ ಡಾ. ಶೋಭಾ ಮೂಲಿಮನೆ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು. ಇಲ್ಲಿನ ಸರ್ಕಾರಿ ಅಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಏರುತ್ತಿದೆ. ಇಲ್ಲಿನ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಮತ್ತು ಅವರ ತಂಡ ಉತ್ತಮ ಕರ್ತವ್ಯ ನಿರ್ವಹಿಸುತ್ತಿದೆ. ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಹೊರಗುತ್ತಿಗೆ ಆಧಾರದಲ್ಲಾದರೂ ಸಿಬ್ಬಂದಿ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ಟಿಎಚ್‌ಒ ಡಾ. ಸವಿತಾ ಕಾಮತ ಮಾತನಾಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ ಕುಮಾರ ಶಿರಾಲಿ ಅಸ್ಪತ್ರೆಗೆ ಭೇಟಿ ನೀಡಿ 24 ಹಾಸಿಗೆಗಳ ಬ್ಲಾಕ್ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಅದಕ್ಕೆ ತಕ್ಕಂತೆ ಸಿಬ್ಬಂದಿ ನೀಡಿದರೆ ಭಟ್ಕಳದ ಸರ್ಕಾರಿ ಆಸ್ಪತ್ರೆ ನಾಡಿನ ಖಾಸಗಿ ಆಸ್ಪತ್ರೆಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆಯಲಿದೆ ಎಂದರು.

ಎಫ್‌ಡಿಎ ಪ್ರಹ್ಲಾದ ಕುಲಕರ್ಣಿ, ಮೇಲ್ವಿಚಾರಕ ಗಂಗಾಧರ ಲಕಮಾಪುರ, ಭಟ್ಕಳ ಸರ್ಕಾರಿ ಆಸ್ಪತ್ರೆ ಹಿರಿಯ ವೈದ್ಯರಾದ ಡಾ. ಸತೀಶ ಕುಮಾರ, ಡಾ. ಸುರಕ್ಷಿತ ಶೆಟ್ಟಿ, ಡಾ ಲಕ್ಷ್ಮೀಶ, ಡಾ. ಉಮೇಶ, ಡಾ. ಜನಾರ್ಧನ ಮೊಗೇರ, ಡಾ. ಕಮಲಾ ನಾಯ್ಕ, ಡಾ. ನಾಜಿಯಾ, ಡಾ. ಸ್ವಾತಿ ಉದ್ಯಾವರ, ಡಾ. ವಿದ್ಯಾ ಭಟ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net