

ಬ್ಯಾಡಗಿ: ಪಟ್ಟಣದ ಜನತೆಗೆ ಸರ್ಕಾರದ ಹೊಸ ಯೋಜನೆಗಳನ್ನು ಜಾರಿಗೊಳಿಸಿ ಪುರಸಭೆ ವ್ಯಾಪ್ತಿಯಲ್ಲಿ ಇನ್ನಷ್ಟು ಅಭಿವೃದ್ಧಿಗೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಅಧಿಕಾರಿಗಳು, ಚುನಾಯಿತ ಸದಸ್ಯರು ಸಹಕರಿಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪಟ್ಟಣದ ಕದರಮಂಡಲಗಿ ರಸ್ತೆಯಲ್ಲಿ ವಾಣಿಜ್ಯ ಮಳಿಗೆಗಳ ದುರಸ್ತಿ ಹಾಗೂ 60 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. 2016-17ರಲ್ಲಿ ಬ್ಯಾಡಗಿಯ ಸಂತೆ ಮಾರುಕಟ್ಟೆ ಮೇಲ್ಛಾವಣಿ, ವಾಣಿಜ್ಯ ಮಳಿಗೆಗಳ ನಿರ್ವಣದ ಮೂಲಕ ಪುರಸಭೆಗೆ ಆದಾಯ ತಂದುಕೊಡುವ ನಿಟ್ಟಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಬಳಿಕ 24 ಗಂಟೆಗಳ ಕಾಲ ಕುಡಿಯುವ ನೀರು ಒದಗಿಸಲು, ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಸ್ವಚ್ಛತೆಗೆ ಸಿಬ್ಬಂದಿ ಕಾಳಜಿ ವಹಿಸಬೇಕಿದ್ದು, ಸಾರ್ವಜನಿಕರು ಕೈಜೋಡಿಸಬೇಕಿದೆ ಎಂದರು.
ರಾಣೆಬೆನ್ನೂರು ತಾಲೂಕಿನ ರಾಜೇನಹಳ್ಳಿ ಮಾಕನೂರು ಮಧ್ಯೆ ಚೆಕ್ಡ್ಯಾಂ ನಿರ್ಮಾಣ ಕಾಮಗಾರಿ ಸಿವಿಲ್ ಹಂತ ಮುಗಿದಿದ್ದು, ತಾಂತ್ರಿಕ ಕಾಮಗಾರಿಗಳು ಮುಂದುವರಿದಿವೆ. ಇದರಿಂದ ಸುಮಾರು 2 ಟಿಎಂಸಿಗೂ ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹವಾಗಲಿದ್ದು, ರಾಣೆಬೆನ್ನೂರು ಹಾಗೂ ಬ್ಯಾಡಗಿ ನಗರಕ್ಕೆ 24 ಗಂಟೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದರು.
ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ಮಹ್ಮದ್ರಫೀ ಮುದಗಲ್ಲ, ಹನುಮಂತಪ್ಪ ಮ್ಯಾಗೇರಿ, ಸದಸ್ಯರಾದ ಬಸವರಾಜ ಛತ್ರದ, ಸರೋಜಾ ಉಳ್ಳಾಗಡ್ಡಿ, ಗಾಯತ್ರಿ ರಾಯ್ಕರ, ಕಲಾವತಿ ಬಡಿಗೇರ, ಈರಣ್ಣ ಬಣಕಾರ, ಶಂಕರ ಕುಸಗೂರು, ಮೆಹಬೂಬ್ ಅಗಸನಹಳ್ಳಿ, ಶ್ರೀನಿವಾಸ ಕುರಕುಂದಿ, ಫಕೀರಮ್ಮ ಚಲವಾದಿ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಆಶ್ರಯ ಸಮಿತಿ ಅಧ್ಯಕ್ಷ ಮುನ್ನಾಫಲಿ ಎರೆಸೀಮೆ, ಸದಸ್ಯ ಗಿರೀಶ ಇಂಡಿಮಠ, ದುರ್ಗೆಶ ಗೋಣೆಮ್ಮನವರ, ಸರ್ಫರಾಜ ಎರಕಲ್ಲ, ಇಂಜಿನಿಯರ್ ಸಂಗಮೇಶ ಹಾದಿಮನಿ, ದಾನಪ್ಪ ಚೂರಿ, ಎಂ.ಎನ್. ಹೊಸಗೌಡ್ರ, ಇತರರಿದ್ದರು.